ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಜಾರ್ಜ್, ಪ್ರಸಾದ್, ಮೊಹಾಂತಿಗೆ ಸಿಐಡಿ ಕ್ಲೀನ್ ಚಿಟ್

ಮಡಿಕೇರಿ ಸೆ.17: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಆರೋಪಿಗಳಾದ ಮಾಜಿ ಸಚಿವ ಕೆ.ಜೆ.ಜಾರ್ಜ್, ಅಂದಿನ ಎಡಿಜಿಪಿ ಎ.ಎಂ. ಪ್ರಸಾದ್ ಹಾಗೂ ಐಜಿಪಿ ಪ್ರಣವ್ ಮೊಹಾಂತಿ ಅವರಿಗೆ ಸಿಐಡಿಯಿಂದ ಕ್ಲೀನ್ ಚಿಟ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ಸೆ.19ರಂದು ಈ ವರದಿಯ ವಿಚಾರಣೆ ನಡೆಯಲಿದ್ದು, ಕುತೂಹಲ ಮೂಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮಡಿಕೇರಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್(ಜೂನಿಯರ್ ಡಿವಿಜನ್) ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.
ಸೆ. 17ರಂದು ಮಡಿಕೇರಿ ನ್ಯಾಯಾಲಯಕ್ಕೆ ಹಾಜರಾದ ಸಿಐಡಿ ಅಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸೆ.19 ರಂದು ವಿಚಾರಣೆ ನಡೆಯಲಿದೆ. ಸುಮಾರು 169 ಪುಟಗಳ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.19ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಮಡಿಕೇರಿಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 43 ದಿನಗಳ ಹಿಂದೆ ಸಿಐಡಿಗೆ ನಿರ್ದೇಶನ ನೀಡಿತ್ತು. ಗಣಪತಿ ಅವರ ಪುತ್ರ ನೇಹಾಲ್ ಅವರ ಕೋರಿಕೆಯನ್ನು ಮನ್ನಿಸಿ ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯ ಜುಲೈ 18ರಂದು ಅಂದಿನ ಬೆಂಗಳೂರು ನಗರಾಭಿವೃದ್ಧ್ಧಿ ಸಚಿವ ಕೆ.ಜೆ.ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಹಾಗೂ ಎ.ಎಂ.ಪ್ರಸಾದ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಆ.5 ರೊಳಗಾಗಿ ವರದಿ ನೀಡುವಂತೆ ಮಡಿಕೇರಿ ನಗರಠಾಣೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಅದರನ್ವಯ ಜುಲೈ 19ರಂದು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆ.4 ರಂದು ನ್ಯಾಯಾಲಯಕ್ಕೆ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಿದ್ದರು. ಈ ನಡುವೆ ಆರೋಪಿಗಳಾದ ಹಿರಿಯ ಪೊಲೀಸ್ ಅಧಿಕಾರಿಗಳಿಬ್ಬರು ಮಡಿಕೇರಿ ನ್ಯಾಯಾ ಲಯದ ಆದೇಶವನ್ನು ವಜಾಗೊಳಿಸಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದರೆ, ಇದನ್ನು ಒಪ್ಪದ ನ್ಯಾಯಾಲಯ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸ್ ಮಹಾ ನಿರೀಕ್ಷಕ ಓಂಪ್ರಕಾಶ್ ಅವರು ಸಿಐಡಿಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಈ ನಡುವೆ ಬೆಂಗಳೂರಿನ ಸಿಐಡಿ ತನಿಖಾ ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಈ.ಬಿ.ಶ್ರೀಧರ್ ಅವರು, ಮಡಿಕೇರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸಲು ಸಿಐಡಿಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದ್ದರು.
ಪ್ರಕರಣದ 2 ಮತ್ತು 3ನೆ ಆರೋಪಿಗಳು ಮಡಿಕೇರಿ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರು ಆರೋಪಿಗಳು ಹಿರಿಯ ಪೊಲೀಸ್ ಅಧಿಕಾರಿಗಳಾಗಿರುವುದರಿಂದ ನಿಷ್ಪಕ್ಷಪಾತವಾಗಿ ನಡೆಸಲು ಮೇಲಿನ ಆರೋಪಿಗಳಿಗಿಂತ ಮೇಲ್ದರ್ಜೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಸಿ, ಅಂತಿಮ ವರದಿ ಸಲ್ಲಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. ಅದರನ್ವಯ ಪೊಲೀಸ್ ಮಹಾ ನಿರ್ದೇಶಕರು ಆ.3 ರಂದು (ಸಿ.ಆರ್. 10/44/ ಕೊಡಗು/2016) ಆದೇಶ ಹೊರಡಿಸಿ ತನ್ನನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿದ್ದು, ಅದರನ್ವಯ ನಗರಠಾಣೆ ಅಧೀನದಲ್ಲಿದ್ದ ಪ್ರಕರಣದ ಕಡತವನ್ನು ತನಿಖೆಗಾಗಿ ಪಡೆದುಕೊಂಡಿದ್ದೇನೆ. ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲು ಸಮಯಾವಕಾಶ ನೀಡಬೇಕೆಂದು ಶ್ರೀಧರ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ಈ ನಿವೇದನೆಯನ್ನು ಅಂಗೀಕರಿಸಿದ ನ್ಯಾಯಾಲಯ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಸೆ.19 ರೊಳಗಾಗಿ ಅಂತಿಮ ವರದಿ ಸಲ್ಲಿಸುವಂತೆ ಸಿಐಡಿ ತನಿಖಾಧಿಕಾರಿ ಶ್ರೀಧರ್ ಅವರಿಗೆ ನಿರ್ದೇಶನ ನೀಡಿದ್ದರು.
ಇದೀಗ ಅಧಿಕಾರಿಗಳು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ನೀಡಿದ್ದು, ಇದನ್ನು ಪ್ರಶ್ನಿಸಿ ಗಣಪತಿ ಅವರ ತಂದೆ ಕುಶಾಲಪ್ಪಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.







