ವಿಚಾರಣೆ ಆರಂಭಿಸಿದ ಸಿಬಿಐ
ವಿಮಾನ ಖರೀದಿಯಲ್ಲಿ ಲಂಚ ಪ್ರಕರಣ
ಹೊಸದಿಲ್ಲಿ, ಸೆ.17: ಗಾಳಿಯಲ್ಲಿ ತೇಲಾಡುವ ಕಣ್ಗಾವಲು ವ್ಯವಸ್ಥೆಗಾಗಿ 208 ಮಿಲಿಯನ್ ಡಾಲರ್ ವೆಚ್ಚದ ಮೂರು ವಿಮಾನಗಳನ್ನು ಬ್ರೆಜಿಲ್‌ನ ಎಂಬ್ರಾಯರ್ ಕಂಪೆನಿಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಪೂರೈಸುವ ವ್ಯವಹಾರದಲ್ಲಿ ಮಧ್ಯವರ್ತಿಗೆ ಕಮಿಷನ್ ಸಂದಾಯ ವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸಿಬಿಐ ಪ್ರಾಥಮಿಕ ವಿಚಾರಣೆಯನ್ನು ದಾಖಲಿಸಿದೆ.
ರಕ್ಷಣಾ ಇಲಾಖೆಯ ಪ್ರಸ್ತಾಪದಂತೆ ಸಿಬಿಐ ರಕ್ಷಣಾ ಇಲಾಖೆಯ ಅಜ್ಞಾತ ಅಧಿಕಾರಿಯ ವಿರುದ್ಧ ಪ್ರಾಥಮಿಕ ವಿಚಾರಣೆ ಆರಂಭಿಸಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಮೇಲ್ನೋಟಕ್ಕೆ ಈ ಆರೋಪಕ್ಕೆ ಪುಷ್ಟಿ ಕೊಡುವ ಸಾಕಷ್ಟು ವಿಷಯಗಳು ದೊರೆತ ಕಾರಣ ವಿಚಾರಣೆ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಪ್ರಾಥಮಿಕ ವಿಚಾರಣೆಯ ಹಂತದಲ್ಲಿ ಸಿಬಿಐ ಯಾವುದೇ ಹೇಳಿಕೆಯನ್ನು ದಾಖಲಿಸುವಂತಿಲ್ಲ ಹಾಗೂ ಶೋಧ ನಡೆಸುವಂತಿಲ್ಲ. ಸೌದಿ ಅರೇಬಿಯಾ ಮತ್ತು ಭಾರತಕ್ಕೆ ವಿಮಾನಗಳನ್ನು ಪೂರೈಸುವ ವ್ಯವಹಾರ ಕುದುರಿಸಲು ಎಂಬ್ರಾಯರ್ ಸಂಸ್ಥೆಯು ಮಧ್ಯವರ್ತಿಯ ನೆರವು ಪಡೆದಿದೆ, ಬ್ರಿಟನ್ ಮೂಲದ ರಕ್ಷಣಾ ಏಜೆಂಟ್ ಇಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದ ಎಂದು ಬ್ರೆಜಿಲ್‌ನ ಪತ್ರಿಕೆಯೊಂದು ವರದಿ ಮಾಡಿತ್ತು. ಅಮೆರಿಕದ ಕಾನೂನು ಇಲಾಖೆಯು ಎಂಬ್ರಾಯರ್ ಸಂಸ್ಥೆ ಭಾರತದೊಂದಿಗೆ ನಡೆಸಿದ ವ್ಯವಹಾರದ ಬಗ್ಗೆ ಪರಿಶೋಧನೆ ನಡೆಸುತ್ತಿದೆ ಎಂದೂ ಪತ್ರಿಕೆ ವರದಿ ಮಾಡಿತ್ತು. ಭಾರತದ ರಕ್ಷಣಾ ಸಂಗ್ರಹಣ ನಿಯಮ ಪ್ರಕಾರ ಇಂತಹ ವ್ಯವಹಾರಗಳಲ್ಲಿ ಮಧ್ಯವರ್ತಿಗಳ ಪಾತ್ರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. 2010ರಲ್ಲಿ ಎಂಬ್ರಾಯರ್ ಸಂಸ್ಥೆಯು ಡೊಮಿನಿಕನ್ ರಿಪಬ್ಲಿಕ್ ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಿದ ಬಳಿಕ ಈ ಸಂಸ್ಥೆಯ ವ್ಯವಹಾರದ ಬಗ್ಗೆ ಅಮೆರಿಕ ಸಂಶಯದ ಧೋರಣೆ ಹೊಂದಿದೆ. ಆ ಬಳಿಕ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿ, ಸಂಸ್ಥೆಯು ಇತರ ಎಂಟು ರಾಷ್ಟ್ರಗಳ ಜೊತೆ ನಡೆಸಿದ ವ್ಯವಹಾರವನ್ನೂ ಸೇರಿಸಿ ಕೊಳ್ಳಲಾಯಿತು. ಇದರಿಂದ ಪ್ರೇರಿತಗೊಂಡ ಭಾರತದ ರಕ್ಷಣಾ ಇಲಾಖೆ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯೂ ಎಂಬ್ರಾಯರ್ ಸಂಸ್ಥೆಯಿಂದ ವಿವರಣೆ ಕೇಳಿತ್ತು.





