ಪಾಕ್ ಜೊತೆಗಿನ ಸಮರಾಭ್ಯಾಸ: ಭಾರತದ ಕಳವಳಕ್ಕೆ ಕಾರಣವಿಲ್ಲ; ರಶ್ಯ
ಮಾಸ್ಕೊ, ಸೆ. 17: ಉದ್ದೇಶಿತ ರಶ್ಯ-ಪಾಕಿಸ್ತಾನ ಜಂಟಿ ಸಮರಾಭ್ಯಾಸಗಳ ಬಗ್ಗೆ ಭಾರತ ಕಳವಳಗೊಳ್ಳುವ ಅಗತ್ಯವಿಲ್ಲ, ಸಮರಾಭ್ಯಾಸಗಳನ್ನು ವಿವಾದಾಸ್ಪದ ಪ್ರದೇಶಗಳಲ್ಲಿ ನಡೆಸುವುದಿಲ್ಲ ಎಂದು ರಶ್ಯದ ವಿದೇಶ ಸಚಿವಾಲಯದ ಎರಡನೆ ಏಶ್ಯನ್ ಇಲಾಖೆಯ ನಿರ್ದೇಶಕ ಝಮೀರ್ ಕಬುಲೊವ್ ಹೇಳಿದ್ದಾರೆ.
‘ಫ್ರೆಂಡ್‌ಶಿಪ್-2016’ ಎಂಬ ಹೆಸರಿನ ಜಂಟಿ ಸೇನಾ ಅಭ್ಯಾಸವು ಉತ್ತರ ಪಾಕಿಸ್ತಾನದ ರಟ್ಟು ಎಂಬ ಸ್ಥಳದಲ್ಲಿರುವ ಆರ್ಮಿ ಹೈ ಆಲ್ಟಿಟ್ಯೂಡ್ ಸ್ಕೂಲ್ ಮತ್ತು ಚೆರತ್ ಪ್ರದೇಶದಲ್ಲಿರುವ ‘ಸ್ಪೆಶಲ್ ಫೋರ್ಸಸ್ ಟ್ರೇನಿಂಗ್ ಸೆಂಟರ್’ಗಳಲ್ಲಿ ಸೆಪ್ಟಂಬರ್ 24ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ.
ಜಂಟಿ ಸಮರಾಭ್ಯಾಸವು ಶೀತಲ ಸಮರ ಕಾಲದಲ್ಲಿ ಎದುರಾಳಿಗಳಾಗಿದ್ದ ದೇಶಗಳ ನಡುವಿನ ಸಹಕಾರವನ್ನು ಬಲಗೊಳಿಸುವ ಉದ್ದೇಶವನ್ನು ಹೊಂದಿದೆ.
‘‘ವಿವಾದಾಸ್ಪದ ಸ್ಥಳಗಳಲ್ಲಿ ಜಂಟಿ ಸಮರಾಭ್ಯಾಸ ಗಳನ್ನು ನಡೆಸಲಾಗುವುದಿಲ್ಲ ಹಾಗೂ ಈ ಉದ್ದೇಶಕ್ಕಾಗಿ ವಿವಾದವಿರದ ಸ್ಥಳಗಳನ್ನು ಆಯ್ದುಕೊಳ್ಳಲಾಗಿದೆ ಎಂಬುದಾಗಿ ರಶ್ಯ ರಕ್ಷಣಾ ಸಚಿವಾಲಯ ನಮಗೆ ಮಾಹಿತಿ ನೀಡಿದೆ. ಹಾಗಾಗಿ, ಈ ವಿಷಯದಲ್ಲಿ ಕಳವಳಪಡಲು ಭಾರತಕ್ಕೆ ಯಾವುದೇ ಕಾರಣವಿಲ್ಲ’’ ಎಂದು ಕಬುಲೊವ್ ಹೇಳಿರುವುದಾಗಿ ರಶ್ಯದ ಸರಕಾರಿ ಒಡೆತನದ ‘ಸ್ಪೂತ್ನಿಕ್’ ವಾರ್ತಾ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದ ಜೊತೆಗಿನ ಜಂಟಿ ಸಮರಾಭ್ಯಾಸಗಳನ್ನು ಎಲ್ಲಿ ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ಮಾಸ್ಕೊ ಈಗಾಗಲೇ ಹೊಸದಿಲ್ಲಿಗೆ ತಿಳಿಸಿದೆ ಎಂದು ಕಬುಲೊವ್ ನುಡಿದರು.







