ಜನರ ಆತಂಕ ನಿವಾರಿಸುವಂತೆ ಪ್ರಧಾನಿಗೆ ಈಶ್ವರಪ್ಪಮನವಿ

ಬೆಂಗಳೂರು, ಸೆ.17: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುತ್ತಿರುವುದರಿಂದ ರಾಜ್ಯದ ಜನರಲ್ಲಿ ಮನೆ ಮಾಡಿರುವ ಆತಂಕವನ್ನು ನಿವಾರಿಸುವಂತೆ ಪ್ರಧಾನಿ ನರೇಂದ್ರಮೋದಿಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ಕಚೇರಿಯಲ್ಲಿ ಹಿರಿಯ ಪತ್ರ ಕರ್ತರ ನಿಯೋಗವು ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಅವರು ಈ ವಿಷಯ ತಿಳಿಸಿದರು.
ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿಗೆ ರಾಜ್ಯದ ಪರಿಸ್ಥಿತಿಯನ್ನು ವಿವರಿಸುವ ಮಾಹಿತಿಯನ್ನು ಒಳಗೊಂಡ ಪತ್ರಗಳನ್ನು ಬರೆಯ ಲಾಗುವುದು ಎಂದು ಅವರು ಹೇಳಿದರು.ೇಂದ್ರ ಸಚಿವೆ ಉಮಾಭಾರತಿ ಕಾವೇರಿ ನದಿ ನೀರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದಾರೆ. ಆದುದರಿಂದ, ಪ್ರಧಾನಿ ಹಾಗೂ ಅಮಿತ್ ಶಾ ಇಬ್ಬರು ಈ ವಿಚಾರವನ್ನು ಕೈಗೆತ್ತಿಕೊಂಡು ರಾಜ್ಯದ ಜನರ ಆತಂಕವನ್ನು ದೂರು ಮಾಡಲು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡುವುದಾಗಿ ಈಶ್ವರಪ್ಪ ತಿಳಿಸಿದರು.ಾವೇರಿ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಆದರೆ, ಸುಪ್ರೀಂ ಕೋರ್ಟ್ ಪದೇ ಪದೇ ರಾಜ್ಯದ ವಿರುದ್ಧವಾಗಿ ಯಾಕೆ ತೀರ್ಪು ನೀಡುತ್ತಿದೆ ಎಂಬುದು ತನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ರಾಜ್ಯದ ಕಾವೇರಿ ಕಣಿವೆ ಪ್ರದೇಶದಲ್ಲಿ ಲಭ್ಯವಿರುವ ನೀರು ಎಷ್ಟು, ತಮಿಳುನಾಡು ಸಾಂಬಾ ಬೆಳೆಗೆ ನೀರು ಕೇಳುತ್ತಿರುವ ವಿಚಾರವು ಸುಪ್ರೀಂಕೋರ್ಟ್‌ಗೆ ಗೊತ್ತಿದೆ. ಆದರೂ, ರಾಜ್ಯದ ವಿರುದ್ಧವಾಗಿ ಯಾಕೆ ತೀರ್ಪುಗಳು ಹೊರ ಬೀಳುತ್ತಿವೆ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರದ ಲಾತೂರ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಜಲ ಕ್ಷಾಮದ ಹಿನ್ನೆಲೆಯಲ್ಲಿ ಜನ ಹನಿ ನೀರಿಗೂ ಪರದಾಡುವಂತಾಯಿತು. ಅಂತಹ ಸ್ಥಿತಿ ಕರ್ನಾಟಕಕ್ಕೆ ಬರುವುದು ಬೇಡ ಎಂಬ ನಿಯೋಗದ ಕಳಕಳಿಗೆ ಸಹಮತ ವ್ಯಕ್ತಪಡಿಸಿದ ಅವರು, ಈ ಪರಿಸ್ಥಿತಿ ಶಾಂತಿಯುತವಾಗಿ ಇತ್ಯರ್ಥವಾಗುವಂತೆ ಮಾಡಬೇಕು ಎಂದು ಹೇಳಿದರು.
ಮಹಾದಾಯಿ ನದಿ ನೀರಿನ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಗೋವಾ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲಿದ್ದರೂ ರಾಜ್ಯಕ್ಕೆ ಮಹಾದಾಯಿ ನೀರು ಕಲ್ಪಿಸಿಕೊಡಲು ಪ್ರಧಾನಿ ಬಯಸಿದ್ದಾರೆ ಎಂದು ಹೇಳಿದರು.ುಡಿಯುವ ನೀರು ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಎಲ್ಲಿಯವರೆಗೆ ರಾಜಕೀಯ ನಡೆಯುತ್ತದೆಯೊ ಅಲ್ಲಿಯವರೆಗೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದರು.
ನಿಯೋಗದಲ್ಲಿ ತಾರಾಪ್ರಭ ಮೀಡಿಯಾ ಹೌಸ್ ಅಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ, ಹಿರಿಯ ಪತ್ರಕರ್ತರಾದ ಎಸ್.ಕೆ.ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







