ಅಂತಿಮ ಆಟ ಆಡುವವರು ನಾವೇ: ಝಮೀರ್ ಅಹ್ಮದ್
ಬಿಬಿಎಂಪಿ ಮೇಯರ್ ಚುನಾವಣೆ

ಬೆಂಗಳೂರು, ಸೆ. 17: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ‘ಅಂತಿಮವಾಗಿ ಪಂದ್ಯ ಆಡುವವರೇ ನಾವು’ ಎಂದು ಜೆಡಿಎಸ್‌ನಿಂದ ಅಮಾನತುಗೊಂಡಿರುವ ಶಾಸಕ ಝಮೀರ್ ಅಹ್ಮದ್ ಖಾನ್, ಪಕ್ಷದ ಮುಖಂಡರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಮುಂದಿನ ನಡೆಯನ್ನು ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸ್ಪಷ್ಟಣೆ ನೀಡಿದರು.
ಮೇಯರ್ ಚುನಾವಣೆ ಸಂಬಂಧ ದೇವೇಗೌಡ ಅಥವಾ ಕುಮಾರಸ್ವಾಮಿ ತಮ್ಮನ್ನು ಈವರೆಗೂ ಕರೆದು ಸಮಾಲೋಚನೆ ನಡೆಸಿಲ್ಲ. ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಜಾತ್ಯತೀತ ತತ್ವಕ್ಕೆ ಬೆಲೆ ನೀಡಿದಂತೆ ಆಗುತ್ತದೆ ಎಂದು ಅವರು ಹೇಳಿದರು.
ಪಾಲಿಕೆಯ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿಗೆ ಒಲವು ಹೊಂದಿದ್ದು, ಕೇವಲ 14 ಮಂದಿ ಸದಸ್ಯರನ್ನಿಟ್ಟುಕೊಂಡು ಪಾಲಿಕೆ ಮೇಯರ್ ಸ್ಥಾನ ಕೇಳುವುದು ಸರಿಯಲ್ಲ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದ ಝಮೀರ್ ಅಹ್ಮದ್, ಏನೇ ಆದರೂ ನಮ್ಮದೆ ಆಟ ನಡೆಯೋದು ಎಂದು ವಿಶ್ಲೇಷಿಸಿದರು.
ಅಲ್ಪಸಂಖ್ಯಾತ ಸಮುದಾಯಕ್ಕೆ ಬಿಬಿಎಂಪಿ ಉಪ ಮೇಯರ್ ಸ್ಥಾನ ನೀಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದು, ಮುಂಬರುವ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಬೇಕೆಂದರೆ ಉಪ ಮೇಯರ್ ಸ್ಥಾನ ಮುಸ್ಲಿಮರಿಗೆ ನೀಡಬೇಕು ಎಂದು ಒತ್ತಾಯಿಸಿದರು.





