ಡಬ್ಲುಟಿಒ ಮೇಲ್ಮನವಿಯಲ್ಲೂ ಅಮೆರಿಕ ವಿರುದ್ಧ ಭಾರತಕ್ಕೆ ಸೋಲು
ಜಿನೇವ, ಸೆ. 17: ವಿಶ್ವ ವ್ಯಾಪಾರ ಸಂಘಟನೆ (ಡಬ್ಲುಟಿಒ)ಯಲ್ಲಿ, ಸೌರ ವಿದ್ಯುತ್ ಉಪಕರಣಗಳ ಬಳಕೆಗೆ ಸಂಬಂಧಿಸಿ ಅಮೆರಿಕದೊಂದಿಗೆ ಹೊಂದಿದ್ದ ವಿವಾದವೊಂದರಲ್ಲಿ ಭಾರತ ಸಲ್ಲಿಸಿರುವ ಮೇಲ್ಮನವಿಗೆ ಸೋಲಾಗಿದೆ. ಭಾರತೀಯ ಸೌರ ವಿದ್ಯುತ್ ಕ್ಷೇತ್ರದಲ್ಲಿ ಆಮದುಗಾರರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂಬ ಅಮೆರಿಕದ ದೂರನ್ನು ರದ್ದುಪಡಿಸುವಂತೆ ಕೋರಿ ಭಾರತ ಡಬ್ಲುಟಿಒದ ಕದ ತಟ್ಟಿತ್ತು.
ಸೌರ ವಿದ್ಯುತ್ ಉದ್ಯಮಿಗಳು ಭಾರತದಲ್ಲಿ ತಯಾರಾದ ಕೋಶಗಳು ಮತ್ತು ಮೋಡ್ಯೂಲ್‌ಗಳನ್ನೇ ಬಳಸಬೇಕು ಎಂದು ವಿಧಿಸುವ ಮೂಲಕ ಭಾರತ ಡಬ್ಲುಟಿಒ ನಿಯಮಗಳನ್ನು ಉಲ್ಲಂಘಿಸಿದೆ ಎಂಬುದಾಗಿ ಡಬ್ಲುಟಿಒ ನ್ಯಾಯಮಂಡಳಿಯೊಂದು ಈ ಹಿಂದೆ ತೀರ್ಪು ನೀಡಿತ್ತು. ಈಗ ಡಬ್ಲುಟಿಒದ ಮೇಲ್ಮನವಿ ನ್ಯಾಯಾಧೀಶರು ಹಿಂದಿನ ಆದೇಶವನ್ನು ಎತ್ತಿಹಿಡಿದಿದ್ದಾರೆ.
ಡಬ್ಲುಟಿಒ ಮೇಲ್ಮನವಿ ನ್ಯಾಯಮಂಡಳಿಯ ತೀರ್ಪು ಅಂತಿಮವಾಗಿದೆ ಹಾಗೂ ಭಾರತ ಇನ್ನು ತನ್ನ ಕಾನೂನುಗಳನ್ನು ಡಬ್ಲುಟಿಒ ನಿಯಮಗಳಿಗೆ ಅನುಸಾರವಾಗಿ ಹೊಂದಿಸಬೇಕಾಗಿದೆ.
‘‘ಈ ತೀರ್ಪು ಅಮೆರಿಕದ ಸೌರ ವಸ್ತುಗಳ ಉತ್ಪಾದಕರು ಮತ್ತು ಕೆಲಸಗಾರರಿಗೆ ಸಿಕ್ಕಿದ ಸ್ಪಷ್ಟ ವಿಜಯವಾಗಿದೆ ಹಾಗೂ ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಮುಂದಿಟ್ಟ ಇನ್ನೊಂದು ಹೆಜ್ಜೆಯಾಗಿದೆ’’ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಮೈಕಲ್ ಫ್ರೋಮನ್ ಹೇಳಿಕೆಯೊಂದರಲ್ಲಿ ತಿಳಿಸಿದರು. ಭಾರತ ತನ್ನ ನಿಯಮಗಳನ್ನು ಜಾರಿಗೆ ತಂದ ಬಳಿಕ, ಭಾರತಕ್ಕೆ ಅಮೆರಿಕದ ಸೌರ ಉಪಕರಣಗಳ ರಫ್ತಿನಲ್ಲಿ 90 ಶೇಕಡ ಕುಸಿತವಾಗಿತ್ತು ಎಂದು ಹೇಳಿಕೆ ತಿಳಿಸಿದೆ.







