ನೀವು ಮಾಡಿಸುವ ವೈದ್ಯಕೀಯ ಪರೀಕ್ಷೆಗಳಿಂದ ಆಗುವುದೇನು?
ಈ ಅಧ್ಯಯನ ವರದಿಯ ಮಹತ್ವದ ಫಲಿತಾಂಶ ನೋಡಿ

ಮುಂಬೈ, ಸೆ.18: ವಿದೇಶಗಳಲ್ಲಿ ಸಾಮಾನ್ಯವಾಗಿ ಹೈಪರ್ ಟೆನ್ಷನ್ ಅಥವಾ ಹೃದಯಾಘಾತಕ್ಕೆ ಒಳಗಾಗುವುದಕ್ಕಿಂತ ಸುಮಾರು ಹತ್ತು ವರ್ಷ ಮುಂಚಿತವಾಗಿಯೇ ಭಾರತದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಈ ಸಮಸ್ಯೆಗೆ ಈಡಾಗುತ್ತಿದ್ದಾರೆ. ಆದ್ದರಿಂದ ವಾರ್ಷಿಕ ಆರೋಗ್ಯ ತಪಾಸಣೆಗೆ ಮುಗಿ ಬೀಳುವುದು ಸಾಮಾನ್ಯ. ಆದರೆ ಮುಂಬೈನ ಎಂಟು ಕ್ಲಿನಿಕ್‌ಗಳು ನೀಡುತ್ತಿರುವ 25 ಹೆಲ್ತ್ ಪ್ಯಾಕೇಜ್‌ಗಳ ಬಗ್ಗೆ ಅಧ್ಯಯನ ನಡೆಸಿದಾಗ, ಇಂಥ ಪರೀಕ್ಷೆಗಳು ಸಾಮಾನ್ಯ ಆರೋಗ್ಯದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎನ್ನುವುದು ಬಹಿರಂಗವಾಗಿದೆ.
ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾದಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಿರುವ ಡಾ.ಯಶ್ ಲೋಖಂಡ್‌ವಾಲಾ, "ನಿಯತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು, ಸಮುದಾಯ ಆರೋಗ್ಯಕ್ಕೆ ಹೋಲಿಸಿದರೆ ಪ್ರತಿಕೂಲ ಪರಿಣಾಮ ಬೀರುವಂಥದ್ದು" ಎಂದು ಹೇಳಿದ್ದಾರೆ.
ವಿಟಮಿನ್ ಡಿ, ವಿಟಮಿನ್ ಬಿ12, ಥೈರಾಯ್ಡ ಹಾರ್ಮೋನ್, ಎಲೆಕ್ಟ್ರಾಲಿಟ್ಸ್, ಅಪದಮನಿ ಕಾರ್ಯನಿರ್ವಹಣೆ ಪರೀಕ್ಷೆಯಂಥ ತಪಾಸಣೆಗಳು ಅನಗತ್ಯ. ಇವನ್ನು ಹೆಲ್ತ್ ಪ್ಯಾಕೇಜ್‌ಗಳಲ್ಲಿ ಸೇರಿಸಲಾಗುತ್ತದೆ ಎಂದು ವಿವರಿಸಿದ್ದಾರೆ. ಸಾಮಾನ್ಯವಾಗಿ ಆಸ್ಪತ್ರೆ ದಾಖಲಾತಿಯನ್ನು ಹೆಚ್ಚಿಸುವ ಸಲುವಾಗಿ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ಈ ಹಿರಿಯ ವೈದ್ಯ ಪ್ರತಿಪಾದಿಸಿದ್ದಾರೆ. ಕೆಲ ಹಾರ್ಮೋನ್‌ಗಳ ಅಧಿಕ ಉತ್ಪತ್ತಿ ಅಥವಾ ರಕ್ತದ ಅಂಶಗಳನ್ನು ಸಹಜ ಸ್ಥಿತಿಗೆ ತರುವ ಸಲುವಾಗಿ ಆಸ್ಪತ್ರೆಗೆ ಸೇರುವಂತೆ ಸೂಚಿಸುತ್ತಾರೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.





