ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್ ರಜತ ಸಂಭ್ರಮಾಚರಣೆ
ಗ್ರೀನ್ ಪಾರ್ಕ್-1, ಪಿನ್ಯಾಕಲ್ ಎ ಮತ್ತು ಬಿ ಉದ್ಘಾಟನೆ

ಮಂಗಳೂರು, ಸೆ.18: ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಪ್ರವರ್ತನೆಯ ಲ್ಯಾಂಡ್‌ಲಿಂಕ್ಸ್ ಗೃಹ ನಿರ್ಮಾಣ ಸಂಸ್ಥೆ ದೇರೆಬೈಲ್ ಕೊಂಚಾಡಿಯಲ್ಲಿ ನಿರ್ಮಿಸಿರುವ ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್ಗೆ ರಜತ ಸಂಭ್ರಮಾಚರಣೆಯ ಸಂಭ್ರಮ. ಈ ಸಂಭ್ರಮದ ಜೊತೆಗೆ ಸಂಸ್ಥೆ ನಿರ್ಮಿಸಿದ ಎರಡು ಹೊಸ ವಸತಿ ಸಮುಚ್ಚಯಗಳಾದ ‘ಗ್ರೀನ್ ಪಾರ್ಕ್ -1’ ಮತ್ತು ಪಿನ್ಯಾಕಲ್ನ ಎ ಮತ್ತು ಬಿ ಇಂದು ಉದ್ಘಾಟನೆಗೊಂಡಿತು.
ನೂತನ ವಸತಿ ಸಮುಚ್ಚಯಗಳನ್ನು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಆವರು, ಮಾನವೀಯತೆ ಇಲ್ಲದಿದ್ದರೆ ಯಾವ ಸಾಧನಗೈದರೂ ಅದಕ್ಕೆ ವೌಲ್ಯವಿಲ್ಲ. ಮಾನವೀಯ ವೌಲ್ಯಗಳನ್ನೊಳಗೊಂಡು ಪಾಲೇಮಾರ್ ಸಾಧನೆ ಮಾಡಿದ್ದಾರೆ. ಲ್ಯಾಂಡ್‌ಲಿಂಕ್ ಟೌನ್‌ಶಿಪ್‌ನಲ್ಲಿ 2000 ಮನೆಗಳನ್ನು ನೀಡಿರುವುದು ದೊಡ್ಡ ಸಾಧನೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ವಿವಿಯ ಕುಲಾಧಿಪತಿ ಡಾ.ಎನ್.ವಿನಯ ಹೆಗ್ಡೆ, ಬಡ, ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಮನೆ ನಿರ್ಮಿಸಿ ಕೊಡುವ ಪಾಲೆಮಾರ್ ಕಾರ್ಯ ಅಭಿನಂದನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲ್ಯಾಂಡ್‌ಲಿಂಕ್ಸ್ ಅಧ್ಯಕ್ಷ ಹಾಗೂ ಸಿಇಒ ಕೃಷ್ಣ ಜೆ. ಪಾಲೇಮಾರ್, ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್‌ಗೆ ಈಗ ರಜತ ಸಂಭ್ರಮ. 2000ನೆ ಇಸವಿಯಲ್ಲಿ ಪೂರ್ಣಗೊಂಡ ಈ ಟೌನ್‌ಶಿಪ್‌ನಲ್ಲಿ ಪ್ರಸ್ತುತ ಸುಮಾರು 2,500ಕ್ಕೂ ಅಧಿಕ ಕುಟುಂಬಗಳು ನೆಲೆಸಿವೆ. ಶ್ರೀ ಸಾಮಾನ್ಯನಿಗೆ ವಸತಿ ಸೌಲಭ್ಯ ಒದಗಿಸಿಕೊಟ್ಟ ಹೆಗ್ಗಳಿಕೆಗೆ ಲ್ಯಾಂಡ್‌ಲಿಂಕ್ಸ್ ಪಾತ್ರವಾಗಿದೆ. ತಾನು ಶಾಸಕನಾಗಲು, ಸಚಿವನಾಗಲು ಈ ಬಡಾವಣೆಯೂ ಕೊಡುಗೆ ನೀಡಿದೆ ಎಂದರು.
ಸ್ಥಳೀಯ ಕಾರ್ಪೋರೇಟರ್ ರಾಜೇಶ್ ಕೊಂಚಾಡಿ ಮಾತನಾಡಿ, ಟೌನ್‌ಶಿಪ್ ಮೂಲಕ ಗುಡ್ಡಗಾಡನ್ನು ದೇಶ ಮೆಚ್ಚುವ ಪ್ರದೇಶವನ್ನಾಗಿ ರೂಪಿಸಿದ ಲ್ಯಾಂಡ್‌ಲಿಂಕ್ಸ್‌ನದ್ದು ಎಂದರು.
ಕಾರ್ಯಕ್ರಮದಲ್ಲಿ ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್ ಅಭಿವೃದ್ಧಿಗೆ ಕಾರಣರಾದ ಡಾ.ಯು.ಕುಮಾರಸ್ವಾಮಿ, ಕೆ.ಗೋಪಾಲಕೃಷ್ಣ ಶೆಣೈ, ಸುರೇಶ್ ಪೈ, ಸಿ.ಎಚ್.ಆನಂದ ಭಟ್, ಕೃಷ್ಣರಾಜ ಮಯ್ಯ ಹಾಗೂ ಯೋಗೀಶ್ ಪೈಯವರನ್ನು ಅಭಿನಂದಿಸಲಾಯಿತು.
ಸಂಸ್ಥೆಯ ಆಡಳಿತ ನಿರ್ದೇಶಕ ಪ್ರದೀಪ್ ಪಾಲೆಮಾರ್ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮಮ ನಿರೂಪಿಸಿದರು.





