ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ: ಕೇರಳದಲ್ಲಿ ನ್ಯಾಯಕ್ಕಾಗಿ 8000 ಪ್ರಕರಣಗಳು ಕಾದಿವೆ !

ತಿರುವನಂತಪುರಂ, ಸೆ. 18: ಸೌಮ್ಯಾ ಕೊಲೆಪ್ರಕರಣದ ಆರೋಪಿ ಗೋವಿಂದ ಚಾಮಿಯ ಗಲ್ಲುಶಿಕ್ಷೆಯನ್ನು ರದ್ದುಪಡಿಸಿದ ಸುಪ್ರೀಂಕೋರ್ಟಿನ ತೀರ್ಪು ಚರ್ಚೆಯಾಗುತ್ತಿರುವುದರೊಂದಿಗೆ ಇದಕ್ಕೆ ಸಮಾನವಾದ ಪ್ರಕರಣಗಳಲ್ಲಿ ಪೀಡಿತರಾದ ಮಹಿಳೆಯರಿಗೆ ನ್ಯಾಯವಿಳಂಬವಾಗುತ್ತಿದೆ ಎಂದು ಆಕ್ಷೇಪ ಕೇಳಿಬರುತ್ತಿದೆ ಎಂದು ವರದಿಯಾಗಿದೆ. 2008ರಿಂದ ಇದುವರೆಗೆ ಎಂಟುಸಾವಿರ ಪ್ರಕರಣಗಳು ನ್ಯಾಯಕ್ಕಾಗಿ ಕಾದು ನಿಂತಿವೆ. ಈ ಪ್ರಕರಣಗಳಲ್ಲಿ ಶೇ.75ರಷ್ಟು ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದೆ ಎಂದು ಸರಕಾರದ ಲೆಕ್ಕವೇ ವಿವರಿಸುತ್ತಿವೆ. ಈ ಪ್ರಕರಣಗಳ ಸಾಲಿನಲ್ಲಿ ವಕ್ಕಳ ವಿರುದ್ಧ ಲೈಂಗಿಕ ಕಿರುಕುಳವನ್ನು ತಡೆಯಲಿಕ್ಕಾಗಿರುವ ಪೊಕ್ಸೊ ಪ್ರಕರಣಗಳೂ ಇವೆ. ಮಕ್ಕಳು ಮತ್ತು ಮಹಿಳೆಯರ ವಿರುದ್ಧ ಪ್ರಕರಣಗಳಲ್ಲಿ ಅತಿಶೀಘ್ರ ತೀರ್ಪು ಬರಬೇಕೆಂದು ಕೋಝಿಕ್ಕೋಡ್, ತಿರುವನಂತಪುರಂ,ಎರ್ನಾಕುಳಂಗಳಲ್ಲಿ ವಿಶೇಷ ಕೋರ್ಟನ್ನೇ ಸ್ಥಾಪಿಸಲಾಗಿದೆ.ಆದರೆ ಅದು ಅಷ್ಟೊಂದು ಫಲಪ್ರದವಾಗಿಲ್ಲ.
ಪೊಲೀಸರ ನಿಷ್ಕ್ರಿಯತೆ ಇದಕ್ಕೆ ಕಾರಣವಾಗುತ್ತಿದೆ. ಹೆಚ್ಚಿನ ಪ್ರಕರಣಗಳಲ್ಲಿ ಸಾಕ್ಷಿ, ಆರೋಪಿಗಳ ಪ್ರಭಾವ ಮತ್ತು ಬೆದರಿಕೆಗೊಳಗಾಗಿ ಸಾಕ್ಷ್ಯಬದಲಾಯಿಸುವ ಪ್ರಸಂಗಗಳು ನಡೆಯುತ್ತಿವೆ.ಪೊಲೀಸರ ಪ್ರಕಾರ 2016 ಜುಲೈವರೆಗೆ 7909 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ವಿರುದ್ಧ ಅಪರಾಧಕೃತ್ಯಗಳ ಹೆಸರಲ್ಲಿ 2015ರಲ್ಲಿ 12383 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ1263 ಆಗಿದೆ.ಈ ವರ್ಷ ಜುಲೈವರೆಗೆ ಪೊಕ್ಸೊ ಕಾನೂನು ಪ್ರಕಾರ 1156 ಕೇಸು ದಾಖಲಾಗಿವೆ. 2015ರಲ್ಲಿ 1569 ಪೊಕ್ಸೊ ಕೇಸುಗಳು ದಾಖಲಾಗಿದ್ದವು. ನಾಲ್ಕುಸಾವಿರ ಪ್ರಕರಣಗಳಲ್ಲಿತನಿಖೆ ವಿಳಂಬವಾಗುತ್ತಿವೆ. 2012ರಿಂದ 2015ರವರೆಗೆ ಮೂರುಸಾವಿರಕ್ಕೂ ಅಧಿಕ ಕೇಸುಗಳು ಕೋರ್ಟಿನಲ್ಲಿ ಧೂಳು ತಿನ್ನುತ್ತಿವೆ ಎಂದು ಮಕ್ಕಳ ಹಕ್ಕುಆಯೋಗ ಹೇಳಿದೆ.







