ಹನುಮಂತಪುರ ನ್ಯಾಯಬೆಲೆ ಅಂಗಡಿಯಲ್ಲಿ ಮೋಸ ಆರೋಪ: ಗ್ರಾಹಕರ ಆಕ್ರೋಶ
.jpg)
ಹಾಸನ, ಸೆ.18: ತಾಲೂಕಿನ ಹನುಮಂತಪುರ ನ್ಯಾಯಬೆಲೆ ಅಂಗಡಿಯಲ್ಲಿ ನೀಡುವ ಧವಸಧಾನ್ಯದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ರವಿವಾರ ಧರಣಿ ನಡೆಸಿದರು.
ಪಂಚಾಯತ್ ವ್ಯಾಪ್ತಿಯಲ್ಲಿ ಇಡಲಾಗಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು ಎಷ್ಟೆಷ್ಟು ದವಸಧಾನ್ಯ ನೀಡಲಾಗುತ್ತದೆ ಎಂಬುದರ ಬಗ್ಗೆ ನಾಮ ಫಲಕದಲ್ಲಿ ಹಾಕಬೇಕೆಂಬ ನಿಯಮವಿದ್ದರೂ ಎಲ್ಲವನ್ನೂ ಗಾಳಿಗೆ ತೂರಿರುವ ನ್ಯಾಯಬೆಲೆ ಅಂಗಡಿಯವರು ತಮಗೆ ಇಷ್ಟ ಬಂದ ರೀತಿ ಗ್ರಾಹಕರಿಗೆ ಅಕ್ಕಿ, ಸೀಮೆಎಣ್ಣೆ, ಸಕ್ಕರೆ, ಎಣ್ಣೆಯನ್ನು ಕೊಡುತ್ತಿದ್ದಾರೆ ಎಂದು ಗ್ರಾಹಕರು ದೂರಿದರು.
ಸೀಮೆಎಣ್ಣೆ 3 ಲೀಟರ್ ಕೊಡಲು ಸರಕಾರ ಆದೇಶ ಮಾಡಿದ್ದರೂ ಕೇವಲ ಒಂದೂವರೆ ಲೀಟರ್ ಮಾತ್ರ ನೀಡುತ್ತಾರೆ. ಒಂದು ಲೀಟರಿಗೆ 17.50 ಪೈಸೆ ರೂ. ನಿಗದಿ ಇದ್ದರೂ ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ. ಸಕ್ಕರೆ ಒಂದು ಕೆಜಿಯನ್ನು ತೂಕ ಮಾಡದೆ, ಹಾಗೆಯೇ ನೀಡುವ ಮೂಲಕ ಕಾಲು ಕೆಜಿಯಷ್ಟು ಕಡಿಮೆ ನೀಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಯವರು 50 ರೂ.ನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಿಂಗಳಲ್ಲಿ ಮೂರು ದಿನ ಮಾತ್ರ ಗ್ರಾಹಕರಿಗೆ ನ್ಯಾಯಬೆಲೆ ಅಂಗಡಿ ತೆರೆದು ಧವಸಧಾನ್ಯ ನೀಡುತ್ತಾರೆ. ಉಳಿದ ದಿನ ಪೂರ್ಣ ಬಾಗಿಲು ಹಾಕಲಾಗಿರುತ್ತದೆ. ಜೊತೆಗೆ ಬೆಳಗ್ಗೆ 5 ಗಂಟೆಗೆ ಅಂಗಡಿ ತೆರೆದು ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ತೆರೆಯಲಾಗುತ್ತದೆ. ಗ್ರಾಹಕರಿಗೆ ನೀಡದೆ ವಸ್ತುಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಇದುವರೆಗೂ ಯಾವ ಪ್ರಯೋಜನವಾಗಿಲ್ಲ ಎಂದು ಇದೆ ವೇಳೆ ನ್ಯಾಯಬೆಲೆ ಅಂಗಡಿ ಮುಂದೆ ಗ್ರಾಹಕರು ತಮ್ಮ ಅಳಲು ತೋಡಿಕೊಂಡರು. ಇದಲ್ಲದೆ ಸಿಂಘಪಟ್ಟಣದಲ್ಲೂ ಸೀಮೆಎಣ್ಣೆ ಹಾಗೂ ಪಡಿತರ ವಿತರಣೆಯಲ್ಲಿ ಅನ್ಯಾಯ ಎಸಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದವು.
ಧರಣಿಯಲ್ಲಿ ಹನುಮಂತಪುರ ಗ್ರಾಮದ ನಿವಾಸಿಗಳಾದ ದೀಪಕ್, ಪ್ರೇಮಕುಮಾರ್, ಶಿವಣ್ಣ, ಶಾಂತಕುಮಾರ್, ಕುಮಾರ್ ಇತರರು ಇದ್ದರು.







