151 ಹಾಜಿಗಳ ಪ್ರಥಮ ತಂಡ ಆಗಮನ

ಮಂಗಳೂರು, ಸೆ.18: ಕೇಂದ್ರ ಹಜ್ ಸಮಿತಿ ವತಿಯಿಂದ ಈ ಸಾಲಿನಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಂಡವರಲ್ಲಿ 151 ಮಂದಿ ಹಾಜಿಗಳ ಪ್ರಥಮ ತಂಡ ಇಂದು ಸಂಜೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಮಧ್ಯಾಹ್ನ 2:45ಕ್ಕೆ ಆಗಮಿಸಬೇಕಾಗಿದ್ದ ಏರ್ ಇಂಡಿಯಾ ವಿಮಾನವು ಮಕ್ಕಾದಿಂದ ವಿಳಂಬವಾಗಿ ಹೊರಟಿದ್ದರಿಂದ ಸಂಜೆ 6:15 ಸುಮಾರಿಗೆ ಮಂಗಳೂರು ಭೂ ಸ್ಪರ್ಶ ಮಾಡಿದೆ.
ಈ ಸಂದರ್ಭದಲ್ಲಿ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ, ವಕ್ಫ್ ಅಧಿಕಾರಿ ಅಬೂಬಕರ್, ರಾಜ್ಯ ಹಜ್ ಸಮಿತಿಯ ಅಧಿಕಾರಿ ಫೈರೋಝ್ ಪಾಶಾ,ಹಜ್ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಮಹ್ಮೂದ್ ಹಾಜಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಹನೀಫ್ ಹಾಜಿ, ಮಹ್ಮೂದ್ ಹಾಜಿ ಉಪಸ್ಥಿತರಿದ್ದರು.
ಇಂದು ಮಂಗಳೂರಿಗೆ ಆಗಮಿಸಿದ ಏರ್‌ಇಂಡಿಯಾದಲ್ಲಿ 152 ಮಂದಿ ಹಾಜಿಗಳು ಬರಬೇಕಾಗಿತ್ತು. ಆದರೆ, ಹಜ್ ಆಗಸ್ಟ್ 4 ರಂದು ಹೊರಟ ಪ್ರಥಮ ತಂಡದಲ್ಲಿ ಸುಳ್ಯ ಅರಂತೋಡು ನಿವಾಸಿ ಅಬೂಬಕರ್ ಎಂಬವರು ಅಸೌಖ್ಯದಿಂದ ನಿಧನ ಹೊಂದಿದ್ದರು. ಮದೀನಾದಲ್ಲಿ ಸುಮಾರು 10 ದಿನಗಳ ಕಾಲ ಇದ್ದ ಅಬೂಬಕರ್ ಅವರು ನಂತರ ಮಕ್ಕಾಕ್ಕೆ ಬಂದು ಮೂರು ದಿನಗಳ ಬಳಿಕ ಅಸೌಖ್ಯ ಕಾಣಿಸಿಕೊಂಡಿದ್ದರಿಂದ ಮಕ್ಕಾದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅವರ ಕಾಲುಗಳು ನಿಶ್ಚಲವಾಗಿದ್ದರಿಂದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಿದ್ದರು. ಅದರಂತೆ ಶಸ್ತ್ರ ಚಿಕಿತ್ಸೆಗೆ ದಿನಾಂಕ ನಿಗದಿಯಾಗಿತ್ತು. ಆದರೆ, ಅದರ ಮುಂಚೆಯೇ ಅವರು ಮೃತಪಟ್ಟರೆಂದು ಅವರ ಪುತ್ರ ಶೇಖ್ ಅಲಿ ತಿಳಿಸಿದರು. ಅಬೂಬಕರ್ ಅವರೊಂದಿಗೆ ಅವರ ಪತ್ನಿಯೂ ಹಜ್ ಯಾತ್ರೆ ಕೈಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಾಜಿಯೋರ್ವರು ಪ್ರಥಮ ತಂಡದಲ್ಲಿ ಆಗಮಿಸಿದ್ದರು. ಬೆಳಗಾವಿಯ ಮುಹಮ್ಮದ್ ಯೂಸುಫ್ ರಂಗ್ರೇಝ್ ಅವರು ಅ.12ರಂದು ಬೆಂಗಳೂರಿಗೆ ಆಗಮಿಸುವ ವಿಮಾನದಲ್ಲಿ ಬರಬೇಕಾಗಿತ್ತು. ತುರ್ತು ಅಗತ್ಯದ ಹಿನ್ನೆಲೆಯಲ್ಲಿ ಅವರನ್ನು ಪ್ರಥಮ ತಂಡದಲ್ಲೇ ಕಳುಹಿಸಿಕೊಡಲಾಗಿತ್ತು.
19ರಂದು ಎರಡನೆ ತಂಡ
ಸೆಪ್ಟಂಬರ್ 19ರಂದು ಬೆಳಗ್ಗೆ 11.05ಕ್ಕೆ 154 ಮಂದಿ ಹಾಜಿಗಳನ್ನೊಳಗೊಂಡ ಹಾಜಿಗಳ ಎರಡನೆ ತಂಡ ಆಗಮಿಸಲಿದೆ.
ವ್ಯವಸ್ಥೆ ಚೆನ್ನಾಗಿತ್ತುಮಂಗಳೂರಿನಿಂದ ಹೊರಟಿದ್ದ ಹಜ್ ಯಾತ್ರಿಕರಿಗೆ ಶಾರ್ಜಾದಲ್ಲಿಬಹಳ ಹೊತ್ತಿನವರೆಗೆ ಕಾದಿಸಿದ್ದನ್ನು ಹೊರತುಪಡಿಸಿದರೆ ಮತ್ತೆಲ್ಲವೂ ವ್ಯವಸ್ಥಿತವಾಗಿತ್ತು. ಯಾವುದೇ ಅಡಚಣೆ ಇರಲಿಲ್ಲ. ಸ್ವಯಂ ಸೇವಕರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಅಬ್ದುಲ್ ಶಮೀಮ್ , ಕುತ್ತಾರ್‌ನ ನಿವಾಸಿ.
ಉತ್ತಮವಾಗಿ ನೋಡಿಕೊಂಡರು
ವಸತಿ, ಉಟೋಪಚಾರ ಎಲ್ಲವೂ ಚೆನ್ನಾಗಿತ್ತು. ಮಂಗಳೂರಿನಿಂದ ಹೊರಡುವಾಗ ಲಗ್ಗೇಜ್‌ಗಳಿಗೆ ಹಗ್ಗ ಹಾಕಬಾರದೆಂಬ ನಿಯಮದಿಂದಾಗಿ ಹಜ್ ಯಾತ್ರಿಕರು ಕೊಂಚ ಗಲಿಬಿಲಿಗೊಂಡಿದ್ದರು. ಹಜ್ ಯಾತ್ರೆಯುದ್ದಕ್ಕೂ ಚೆನ್ನಾಗಿ ನಡೆಸಿಕೊಂಡರು.
ಅಮೀರ್, ಕೋಟೆಕಾರ್ ಬೀರಿ ನಿವಾಸಿ.







