ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಒತ್ತಾಯ
ಕಾವೇರಿ ವಿವಾದ

ದಾವಣಗೆರೆ, ಸೆ.18: ಕಾವೇರಿ ಹಾಗೂ ಮಹಾದಾಯಿ ನೀರಿನ ವಿಚಾರಕ್ಕೆ ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಒತ್ತಾಯಿಸಿದರು. ನಗರದ ಜಯದೇವ ವೃತ್ತದಲ್ಲಿ ಜಿಲ್ಲಾ ಕನ್ನಡಪರ ಸಂಘಟನೆಗಳು ಕೈಗೊಂಡಿರುವ ನಿರಂತರ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಮಾತನಾಡಿ, ಕಾವೇರಿ ಕನ್ನಡ ನಾಡಿನ ಜೀವನದಿ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಕನ್ನಡ ನಾಡಿನ ಕೆಲ ಭಾಗದಲ್ಲಿ ಹರಿದು ತಮಿಳುನಾಡು ಸೇರಿ ಮುದ್ರೆ ಸಮುದ್ರ ಸೇರುತ್ತಿದೆ ಎಂದರು. ಕಾವೇರಿ ನದಿಗೆ ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಲಾಗಿದೆ. ಅಲ್ಲಿ ಸುಂದರ ಉದ್ಯಾನ ನಿರ್ಮಿಸಿದ್ದಾರೆ. ಜಲಾಶಯ ತುಂಬಿ ನೀರು ತಮಿಳುನಾಡು ಕಡೆಗೆ ಹರಿಯುತ್ತದೆ. ಇಷ್ಟೆಲ್ಲಾ ಇದ್ದರೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕಾವೇರಿ ಹೆಸರಿನಲ್ಲಿ ಜಗಳ ತೆಗೆಯುತ್ತಿದ್ದಾರೆ. ರಾಷ್ಟ್ರ ಉಚ್ಚನ್ಯಾಯಾಲಯ ಕೃಷ್ಣರಾಜ ಸಾಗರದಿಂದ ತಮಿಳುನಾಡಿಗೆ ನೀರು ಬಿಡಲು ಆದೇಶಿಸಿರುವುದು ಖಂಡನೀಯ ಎಂದರು.
ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ 2 ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳನ್ನು ಕರೆಸಿ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸುತ್ತಿದೆ. ಕಳೆದ 20 ದಿನಗಳ ಹಿಂದೆಯೇ ಈ ಕೆಲಸ ಮಾಡಿದ್ದರೆ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಯುವುದು ತಪ್ಪುತ್ತಿತ್ತು ಎಂದರು.
ಧರಣಿಯಲ್ಲಿ ಟಿ.ಅಜ್ಜೇಶಿ, ಹೊನ್ನಮ್ಮ ದೇವರಬೆಳಕೆರೆ, ಎಚ್.ಎಂ. ಶೀಲಾಕೊಟ್ರೇಶ್, ನಿರ್ಮಲಾ ಮೃತ್ಯುಂಜಯ, ಅಮೃತಾಚಾರ್, ಬಿ.ಎನ್. ಬಾಬು, ಹುಸೈನ್ ಉಜ್ಜಯಿನಿ, ಎಚ್.ಎಂ. ಕೊಟ್ರೇಶ್, ವೀರಭದ್ರಪ್ಪ ಆದಾಪುರ, ಶಂಕರ್, ಗಿರೀಶ್ ಕುಮಾರ್, ಅಭಿಷೇಕ್, ತಿಮ್ಮೇಶ್, ರಾಜು, ಶಿವಕುಮಾರ್, ನಾಗೇಂದ್ರ ಬಂಡೀಕರ್, ಸೋಮಶೇಖರ್ ಮತ್ತಿತರರು ಹಾಜರಿದ್ದರು.







