ಕವಿ ಮನ-ಕವಿ ನಮನ’ ಕಾರ್ಯಕ್ರಮ
ಪುತ್ತೂರು, ಸೆ.18: ಚೊಕ್ಕಾಡಿಯ ನಿಸರ್ಗದಲ್ಲಿನ ಏಕಾಂತ ಮತ್ತು ಪ್ರಕೃತಿಯ ಸೊಬಗು, ಯಕ್ಷಗಾನದ ಹಿನ್ನೆಲೆ, ಪುಸ್ತಕ ಮಾರಾಟ ಮತ್ತು ಓದುವ ಹವ್ಯಾಸ ತನ್ನಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿತು. ಗೋಪಾಲಕೃಷ್ಣ ಅಡಿಗರ ಚಂಡೆಮದ್ದಳೆ ತಾನು ಸಾಗಬೇಕಾದ ಕಾವ್ಯದ ದಾರಿಯನ್ನು ತೆರೆದು ತೋರಿಸಿತು. ಪರಂಪರೆಯ ಪ್ರಭಾವದಿಂದ ಬಿಡಿಸಿಕೊಳ್ಳುವುದಕ್ಕಾಗಿ ಮತ್ತು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಭಾವಗೀತೆಗಿಂತ ಭಿನ್ನವಾದ ಕಾವ್ಯದ ದಾರಿಯನ್ನು ಆರಿಸಿಕೊಳ್ಳುವ ಅನಿವಾರ್ಯತೆಯಿತ್ತು ಎಂದು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಹೇಳಿದರು. ಪುತ್ತೂರಿನ ಸೀತಾರಾಘವ ಪಪೂ ಕಾಲೇಜು ಪೆರ್ನಾಜೆ ಮತ್ತು ದ.ಕ. ಜಿಲ್ಲಾ ಕಸಾಪ ಪುತ್ತೂರು ಘಟಕ ಇದರ ಸಹಯೋಗದಲ್ಲಿ ನಡೆದ ಸುವರ್ಣ ಸಾಹಿತ್ಯ ಸಂಭ್ರಮ ‘ಕವಿ ಮನ-ಕವಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಎಚ್. ಜಿ., ಸೀತಾರಾಘವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಿ.ಕೆ. ಶಂಕರ ನಾರಾಯಣ ಭಟ್, ಪುತ್ತೂರು ತಾಲೂಕು ಕಸಾಪ ಐತಪ್ಪನಾಯ್ಕಾ ಉಪಸ್ಥಿತರಿದ್ದರು. ಯು. ಶಿವಶಂಕರ ಭಟ್ ಸ್ವಾಗತಿಸಿದರು. ಪಿ. ಶ್ರೀಕೃಷ್ಣ ವಂದಿಸಿದರು.





