ಸುಬ್ರಹ್ಮಣ್ಯ: ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

ಸುಬ್ರಹ್ಮಣ್ಯ,ಸೆ.18: ಮೂಲಭೂತ ಆವಶ್ಯಕತೆಗಳನ್ನು ಪೂರೈಸುವುದರ ಮೂಲಕ ಶ್ರೀಕ್ಷೇತ್ರದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಪಾವಿತ್ರ್ಯತೆಯನ್ನು ಹೆಚ್ಚಿಸುವ ಕಾರ್ಯಕ್ಕೆ ಅಧಿಕ ಒತ್ತು ನೀಡುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧೀನದಲ್ಲಿರುವ ಕುಮಾರಧಾರ ಸ್ನಾನಘಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ರವಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕುಮಾರಧಾರ ಪರಿಸರದಲ್ಲಿ ಪರಿಸರ ಸ್ವಚ್ಛತೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಶೀಘ್ರ ಆಡಳಿತ ಮಂಡಳಿಯು ನೇಮಕಗೊಳ್ಳಲಿದೆ ಎಂದು ರೈ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಅಂಗಾರ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸುಶೀಲಾ.ಎಚ್., ಜಿಪಂ ಸದಸ್ಯೆ ಆಶಾ ತಿಮ್ಮಪ್ಪಗೌಡ, ತಾಪಂ ಸದಸ್ಯ ಅಶೋಕ್ ನೆಕ್ರಾಜೆ, ಸಿಂಡಿಕೇಟ್ ಸದಸ್ಯ ಡಾ.ರಘು ಮುಖ್ಯ ಅತಿಥಿಗಳಾಗಿದ್ದರು. ದೇವಳದ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ರಾಜೇಂದ್ರ ಕೆ.ವಿ., ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಎಸ್.ಕೆ. ಜಗನ್ನಿವಾಸ ರಾವ್, ಪದ್ಮನಾಭ ಕೋಟ್ಯಾನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಕೆ.ಬಿ.ಎಂ.ಪಾಟೇಲ್, ವೇದಮೂರ್ತಿ ಪಿ.ಸುಬ್ರಹ್ಮಣ್ಯ ತಂತ್ರಿ, ತುಳಸೀದಾಸ್, ವಿಮಲಾ ರಂಗಯ್ಯ, ಕೃಷ್ಣ ಗಟ್ಟಿ, ಎಸ್.ಮುಕುಂದ ಸುವರ್ಣ, ಬಿ.ಜಗನ್ನಾಥ ಚೌಟ, ಶಿವರಾಮ ರೈ, ಸುಧೀರ್ ಶೆಟ್ಟಿ, ಕೆ.ಪಿ.ಗಿರಿಧರ್ ಉಪಸ್ಥಿತರಿದ್ದರು.
ದೇವಳದ ಇಒ ನಿಂಗಯ್ಯ ಎಂ.ಎ. ಸ್ವಾಗತಿಸಿದರು. ಪ್ರಾಂಶುಪಾಲ ಬಿ.ವಿಠಲ ರಾವ್ ವಂದಿಸಿದರು. ಉಪನ್ಯಾಸಕ ಮಂಜುನಾಥ್ ಎನ್ ಭಟ್ ಕಾರ್ಯಕ್ರಮ ನಿರೂಪಿಸಿದರು.





