ಭೂರಹಿತರಿಗೆ ಜಮೀನು: ಶೀಘ್ರ ಸ್ಥಳ ಗುರುತಿಸುವ ಪ್ರಕ್ರಿಯೆ; ಡಿಸಿ

ಕಾಸರಗೋಡು, ಸೆ.18: ‘ಭೂರಹಿತರಿಲ್ಲದ ಕೇರಳ ಯೋಜನೆ’ಯ ಎರಡನೆ ಹಂತದಲ್ಲಿ ಇನ್ನೂ ಬಾಕಿಯುಳಿದಿರುವ ಭೂರಹಿತರಿಗೆ ಜಮೀನು ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಶೀಘ್ರ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ನಡೆದ ಕಂದಾಯ ಇಲಾಖಾ ಅವಲೋಕನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಯೋಜನೆಯ ಒಂದನೆ ಹಂತದಲ್ಲಿ ಭೂಮಿ ಲಭಿಸದವರಿಗೆ ಎರಡನೆ ಹಂತದಲ್ಲಿ ಲಭ್ಯವಾಗಲಿದೆ. ಹಂತಹಂತವಾಗಿ ಈ ಯೋಜನೆ ಜಾರಿಗೆ ತರಲು ಸರಕಾರ ತೀರ್ಮಾನಿಸಿದೆ. ಸ್ಥಳ ಗುರುತಿಸಲು ಸರ್ವೇ ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದವರು ವಿವರಿಸಿದರು.
ಐದು ವರ್ಷಗಳ ಹಿಂದೆ ರಾಜ್ಯ ಸರಕಾರ ಭೂರಹಿತರಿಲ್ಲದವರನ್ನು ಗುರುತಿಸಿ ತಲಾ ಮೂರು ಸೆಂಟ್ಸ್ ಸ್ಥಳವನ್ನು ನೀಡಿತ್ತು. ಇದರಿಂದ 10 ಸಾವಿರಕ್ಕೂ ಅಧಿಕ ಮಂದಿ ಇದರ ಲಾಭ ಪಡೆದಿದ್ದರು. ಅರ್ಜಿ ಸಲ್ಲಿಸಿದ ಭೂರಹಿತರಿಗೆ ಅರ್ಜಿಯ ವಿಲೇವಾರಿ ಮಾಡಿ ಸ್ಥಳವನ್ನು ಗುರುತಿಸಿ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 17 ಸಾವಿರ ಅರ್ಜಿಗಳು ಲಭಿಸಿದ್ದವು. ಈ ಪೈಕಿ ಬಹುತೇಕ ಮಂದಿಗೆ ಸ್ಥಳ ಒದಗಿಸಲಾಗಿತ್ತು. ಆದರೆ ಸ್ಥಳ ಗುರುತಿಸಲು ವಿಳಂಬವಾದುದರಿಂದ ಹಲವು ಮಂದಿಗೆ ಸ್ಥಳ ಲಭಿಸಿರಲಿಲ್ಲ. ಇನ್ನು ಹಲವರಿಗೆ ವಾಸ ಯೋಗ್ಯವಿಲ್ಲದ ಸ್ಥಳ ಲಭಿಸಿರುವ ಬಗ್ಗೆ ದೂರು ಕೇಳಿಬಂದಿತ್ತು. ಆದರೆ ಹಂತ ಹಂತವಾಗಿ ಈ ಯೋಜನೆ ಜಾರಿಗೆ ತರಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಇದೀಗ ಎರಡನೆ ಹಂತದಲ್ಲಿ ಸ್ಥಳ ಒದಗಿಸಲಾಗುವುದು ಎಂದು ಕೆ.ಜೀವನ್ ಬಾಬು ನುಡಿದರು
ಸ್ಥಳದ ಜೊತೆಗೆ ಹಕ್ಕು ಪತ್ರವನ್ನು ವಿತರಿಸಲಾಗುತ್ತಿದೆ. ಇದೀಗ ಉಳಿದಿರುವ ಫಲಾನುಭವಿಗಳಿಗೆ ಭೂಮಿ ವಿತರಿಸಲು ಕಂದಾಯ ಇಲಾಖೆ ಸ್ಥಳ ಗುರುತಿಸಲು ಮೂರು ತಂಡಗಳನ್ನು ರಚಿಸಿದೆ. ಮುಂದಿನ ಕೆಲ ವರ್ಷಗಳಲ್ಲಿ ‘ಭೂರಹಿತರಿಲ್ಲದ ಕೇರಳ’ ಯೋಜನೆಯಡಿ ಎಲ್ಲ ಭೂರಹಿತರಿಗೂ ಭೂಮಿ ಒದಗಿಸಲು ಸರಕಾರ ಹೆಜ್ಜೆಯಿರಿಸಿದೆ ಎಂದು ಕೆ. ಜೀವನ್ ಬಾಬು ಹೇಳಿದರು.





