ಸುಳ್ಯ: ಶಾಂತಿ ಮತ್ತು ಮಾನವೀಯತೆ ಚರ್ಚಾಗೋಷ್ಠಿ
ಸುಳ್ಯ, ಸೆ.18: ಜಮಾಅತೆ ಇಸ್ಲಾಮಿ ಹಿಂದ್ ಆಶ್ರಯದಲ್ಲಿ ಶಾಂತಿ ಮತ್ತು ಮಾನವೀಯತೆ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ಚರ್ಚಾಗೋಷ್ಠಿಯು ಶಿವಕೃಪಾ ಕಲಾಮಂದಿರದಲ್ಲಿ ಕಾರ್ಯಕ್ರಮ ಶನಿವಾರ ನಡೆಯಿತು. ವಿಷಯ ಮಂಡಿಸಿದ ಐ.ಜಿ.ಎನ್.ಒ ಉಪನ್ಯಾಸಕ ಬಿ.ಎಸ್ ಶರ್ಪುದ್ಧೀನ್, ಇಸ್ಲಾಮ್‌ನ ತತ್ವ ಆದರ್ಶಗಳನ್ನು ಪಾಲಿಸ ಬೇಕಾದುದು ಎಲ್ಲರ ಕರ್ತವ್ಯ. ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆ ನೆಲೆಗೊಳ್ಳಬೇ ಕಾದರೆ ಮನುಷ್ಯ ಜೀವನದ ಸಂಬಂಧ ಅರ್ಥಪೂರ್ಣವಾಗಿರಬೇಕಾದದ್ದು ಅತ್ಯ ಮೂಲ್ಯ ಎಂದರು.
ವಕೀಲ ಬಿ. ವೆಂಕಪ್ಪಗೌಡ, ಜಾನಪದ ಸಂಶೋಧಕ ಡಾ.ಸುಂದರ್ ಕೇನಾಜೆ, ಚಾರ್ಟೆಡ್ ಅಕೌಂಟೆಂಟ್ ಗಣೇಶ್ ಭಟ್ ಮಾತನಾಡಿದರು.
ಸಂಘಟನೆಯ ಕಾರ್ಯಕರ್ತ ಎಂ. ತ್ವಾಹಾ ಕಿರಾಅತ್ ಪಠಿಸಿದರು. ಸುಳ್ಯ ಜಮಾಅತೆ ಇಸ್ಲಾಮಿ ಹಿಂದ್‌ನ ಸಂಚಾಲಕ ಎಸ್.ಎಂ.ಉಸ್ಮಾನ್ ಸ್ವಾಗತಿಸಿದರು. ಸಂಘಟನೆಯ ಕಾರ್ಯಕರ್ತ ಸಲೀಂ ಕಾರ್ಯಕ್ರಮ ನಿರೂಪಿಸಿದರು. ಅಬ್ದುಸ್ಸಲಾಂಯು. ವಂದಿಸಿದರು.
ಮತಾಂತರ, ಭಯೋತ್ಪಾದನೆ ಪ್ರಸ್ತಾಪ: ವಾಗ್ವಾದ
ಕಾರ್ಯಕ್ರಮದ ಅಂಗವಾಗಿ ನಡೆದ ಚರ್ಚಾಗೋಷ್ಠಿಯ ವೇಳೆ ಕೇಸರಿ ಸಂಘಟನೆಯ ಮುಖಂಡರು ವಾಗ್ವಾದಕ್ಕಿಳಿದು ಗೊಂದಲಕ್ಕೆ ಕಾರಣವಾದರು. ಐ.ಜಿ.ಎನ್.ಒ ಉಪನ್ಯಾಸಕ ಬಿ.ಎಸ್.ಶರ್ಫುದ್ದೀನ್ ಉಪನ್ಯಾಸ ನೀಡಿದ ಬಳಿಕ ಸಭೆಯಲ್ಲಿ ಉಪಸ್ಥಿತರಿದ್ದ ಸಾರ್ವಜನಿಕರಿಗೆ ಚರ್ಚೆಗೆ ಅವಕಾಶ ನೀಡಲಾಯಿತು.
ಈ ವೇಳೆ ಸಭೆಯಲ್ಲಿದ್ದ ಕೇಸರಿ ಸಂಘಟನೆಗಳ ಮುಖಂಡರಾದ ಜಿ.ಜಿ.ನಾಯಕ್, ವಿನಯ ಕುಮಾರ್ ಕಂದಡ್ಕ, ಪ್ರಕಾಶ್ ಹೆಗ್ಡೆ, ಪಿ.ಕೆ.ಉಮೇಶ್ ಮತ್ತಿತರರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಸ್ಲಾಮ್‌ನಿಂದ ಮತಾಂತರ ನಡೆಯುತ್ತಿದೆ. ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಆತಂಕವಾದಿಗಳು, ಐಸಿಸ್‌ಗಳಂತಹ ಸಂಘಟನೆಗಳು ಇಸ್ಲಾಮ್ ಧರ್ಮದಲ್ಲಿ ಹೆಚ್ಚಿವೆ. ಜನಸಂಖ್ಯಾ ಸ್ಫೋಟಕ್ಕೂ ಇಸ್ಲಾಮ್ ಕಾರಣವಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶರ್ಫುದ್ದೀನ್, ಬಲವಂತದಿಂದ ಮತಾಂತರ ಮಾಡುವುದು ಯಾವತ್ತೂ ಸರಿಯಲ್ಲ. ಇಸ್ಲಾಮ್ ಅದನ್ನು ಹೇಳಿಯೂ ಇಲ್ಲ. ಜನಸಂಖ್ಯಾ ಸ್ಫೋಟ ಸಮಸ್ಯೆ ನಿಜ. ಆದರೆ ಅದರಿಂದ ದೇಶಕ್ಕೆ ಲಾಭವೇ ಹೊರತು ನಷ್ಟ ಸಂಭವಿಸುವುದಿಲ್ಲ. ಐಸಿಎಸ್‌ನ್ನು ಪ್ರಪಂಚದ ಯಾವುದೇ ಮುಸ್ಲಿಮ್ ಗುರುಗಳು ಇಸ್ಲಾಮ್ ಧರ್ಮದವರೆಂದು ಹೇಳಿಲ್ಲ. ಈ ರೀತಿ ಮಾಡುವವರು ನಿಜವಾದ ಇಸ್ಲಾಮ್ ಧರ್ಮಕ್ಕೆ ಸೇರಿದವರಲ್ಲ ಎಂದರು.
ಆದರೆ, ಈ ಉತ್ತರದಿಂದ ತೃಪ್ತರಾಗದ ಮುಖಂಡರು ನಮಗೆ ಹಾರಿಕೆಯ ಉತ್ತರ ಬೇಡ. ಸಂಕ್ಷಿಪ್ತ ಉತ್ತರ ಕೊಡಿ ಎಂದು ಪಟ್ಟು ಹಿಡಿದರು. ಶರ್ಫುದ್ದೀನ್ ಕೂಡಾ ಉತ್ತರ ನೀಡಲು ಮುಂದಾದರು. ಆಗ ಸಭೆಯಲ್ಲಿ ಗೊಂದಲ ಉಂಟಾಯಿತು. ಮಧ್ಯಪ್ರವೇಶಿಸಿದ ಬೀರಾ ಮೊಯ್ದಿನ್ ಚರ್ಚೆಯನ್ನು ನಿಲ್ಲಿಸಿ ಕಾರ್ಯಕ್ರಮ ಪಟ್ಟಿಯಂತೆ ಮುಂದುವರಿಸಲು ಸಲಹೆ ನೀಡಿದರು. ಅಂತೂ ಸಭೆಯ ಮುಕ್ತಾಯದ ವೇಳೆ ಕೇಸರಿ ಸಂಘಟನೆಯ ಮುಖಂಡರು ಕಾರ್ಯಕ್ರಮದ ಸಂಘಟಕರಿಗೆ ಹಸ್ತಲಾಘವ ನೀಡಿ ತೆರಳಿದರು.





