ಜಾರ್ಜ್ ನಿರ್ದೋಷಿ ಎಂಬುದು ಸಾಬೀತು: ರಾಮಲಿಂಗಾರೆಡ್ಡಿ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ

ಬೆಂಗಳೂರು, ಸೆ.18: ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ನಿರ್ದೋಷಿಯಾಗಿದ್ದರು. ಅದೀಗ ಸಿಐಡಿ ತನಿಖೆಯಿಂದಲೂ ಸಾಬೀತಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರನಿಧಿನಿಗಳೊಂದಿಗೆ ಮಾತನಾಡಿದ ಅವರು, ತೀವ್ರ ರಾಜಕೀಯ ಒತ್ತಡಗಳ ಹಿನ್ನೆಲೆಯಲ್ಲಿ ಅದಕ್ಕೆ ಮಣಿದು ಕೆ.ಜೆ.ಜಾರ್ಜ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಆದರೆ ಇದೀಗ ತನಿಖಾ ವರದಿಯಿಂದ ಅವರ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲ ಎಂಬುದು ಬೆಳಕಿಗೆ ಬಂದಿದೆ ಎಂದರು.
ಮಾಜಿ ಸಚಿವ ಕೆ.ಜೆ.ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಸಾದ್ ಹಾಗೂ ಪ್ರಣಬ್ ಮೊಹಂತಿ ನಿರ್ದೋಷಿಗಳೆಂದು ತನಿಖಾಧಿಕಾರಿಗಳು ಮಡಿಕೇರಿ ಕೋರ್ಟ್‌ಗೆ 'ಬಿ' ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದರು.
ಮಧ್ಯಸ್ಥಿಕೆ ಸೂಕ್ತ: ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ಸಭೆ ಕರೆದು ಕೋರ್ಟಿನ ಹೊರಗೆ ಸಮಸ್ಯೆ ಇತ್ಯರ್ಥಕ್ಕೆ ಪ್ರಧಾನಿ ಮೋದಿ ಮಧ್ಯಸ್ಥಿತಿ ವಹಿಸಬೇಕು. ಸಲ್ಲದ ನೆಪಗಳನ್ನು ಮುಂದಿಟ್ಟು ಮಧ್ಯಪ್ರವೇಶ ಸಾಧ್ಯವಿಲ್ಲ ಎಂಬುದು ಸರಿಯಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.





