ದೇವದಾಸಿ ಪದ್ಧತಿ ಇಂದಿಗೂ ಜೀವಂತವಿರುವುದು ದುರಂತ: ನಿಡುಮಾಮಿಡಿ ಶ್ರೀ

ಬೆಂಗಳೂರು, ಸೆ.18: ದೇವರು-ಧರ್ಮದ ಹೆಸರಿನಲ್ಲಿ ದೇವದಾಸಿ ಯರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದು, ದೇವದಾಸಿ ಪದ್ಧತಿ ಇಂದಿಗೂ ಮುಂದುವರಿದಿರುವುದು ದುರಂತದ ಸಂಗತಿ ಎಂದು ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರ ಚೆನ್ನಮಲ್ಲ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಪುರಭವನದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ರೇಣುಕ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ,'ಪ್ರತಿಭಾ ಪುರಸ್ಕಾರ' ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸೇರಿದಂತೆ ದೇಶದಲ್ಲಿ ಪ್ರಸ್ತುತ ಈಗಾಗಲೂ ಈ ಅನಿಷ್ಟ ದೇವದಾಸಿ ಪದ್ಧತಿ ಜೀವಂತವಾಗಿದೆ ಎಂದ ಅವರು, ಪ್ರಾಚೀನ ಕಾಲದಲ್ಲಿ ಕನ್ಯೆಯರನ್ನು ದೇವರ ಪೂಜೆ ಮಾಡುವುದಕ್ಕೆ ಬಿಡುತ್ತಿದ್ದರು. ಈಗಲೂ, ಸಹ ಕನ್ಯಾ ಪೂಜೆ ನೇಪಾಳದಲ್ಲಿ ಕಾಣಬಹುದಾಗಿದೆ. ಅದೇ ರೀತಿ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ಗಳಲ್ಲಿ ನೋಡಬಹುದು. ಕಾಲ ಬದಲಾದಂತೆ ದೇವತೆಗಳ ಹೆಸರಿನಲ್ಲಿ ದೇವದಾಸಿಯರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇಂತಹ ಅನಿಷ್ಟ ಪದ್ಧತಿಗೆ ಕಡಿವಾಣ ಬೇಕಾಗಿದೆ ಎಂದು ಒತ್ತಾಯಿಸಿದರು.
ದೇವದಾಸಿ ಪದ್ಧತಿ ಸಮಾಜದ ಮೇಲೆ ಹಲವು ದುಪ್ಪರಿಣಾಮ ಬೀರುತ್ತಿದ್ದು, ಹೆಣ್ಣು ಮಕ್ಕಳನ್ನು ಈ ಅನಿಷ್ಟ ಪದ್ಧತಿಗೆ ಬಳಸಿಕೊಳ್ಳ ಲಾಗುತ್ತಿದೆ. ಇನ್ನಾದರೂ ದೇವದಾಸಿ ಪದ್ಧತಿ ಸಂಪೂರ್ಣ ನಿರ್ಮೂಲನೆ ಆಗಬೇಕು. ಇದಕ್ಕೆ ಜನ ಜಾಗೃತಿ ಅಗತ್ಯವಿದೆ ಎಂದ ಅವರು, ದೇವದಾಸಿ ಪದ್ಧತಿ ಜೀವಂತವಾಗಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕು ಹಾಗೂ ಹೆಣ್ಣುಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವಂತೆ ಆಗ್ರಹಿಸಿದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ವಿದ್ಯಾರ್ಥಿಗಳು ಸಮಾಜವನ್ನು ತಿದ್ದುವ ಕಾಯಕದಲ್ಲಿ ತೊಡಗಿ ಮೌಲ್ಯ ಶಿಕ್ಷಣವನ್ನು ಪಡೆಯಬೇಕಾಗಿದೆ. ಅಲ್ಲದೆ, ಇಂದಿನ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಾಗಿದ್ದು, ದಾರ್ಶನಿಕ, ತತ್ವಜ್ಞಾನಿಗಳ ಚಿಂತನೆಗಳು, ವಿಚಾರಧಾರೆಗಳು ವಿದ್ಯಾರ್ಥಿ ಸಮುದಾಯಕ್ಕೆ ಮಾದರಿಯಾಗಬೇಕು ಎಂದು ನಿಡುಮಾಮಿಡಿ ಶ್ರೀ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕೆಜಿಎಫ್ ಕ್ಷೇತ್ರದ ಶಾಸಕಿ ವೈ,ರಾಮಕ್ಕ, ಬಳಗದ ಮುಖಂಡ ಬಿ.ವಿ.ಸಂಪಂತ್, ಸಂಘದ ಅಧ್ಯಕ್ಷ ಎಂ. ನಾಗೇಂದ್ರ ಸಕಲವಾರ, ಬಿಜೆಪಿ ಹಿರಿಯ ಉಪಾಧ್ಯಕ್ಷ ಇ.ಅಶ್ವಥ್ ನಾರಾಯಣ್ ಸೇರಿ ಪ್ರಮುಖರು ಹಾಜರಿದ್ದರು. ಇದೇ ವೇಳೆ 103 ವಿದ್ಯಾರ್ಥಿಗಳಿಗೆ 'ಪ್ರತಿಭಾ ಪುರಸ್ಕಾರ' ನೀಡಿ ಗೌರವಿಸಲಾಯಿತು.





