ಸಮಾಜ ಸುಧಾರಣೆಗೆ ದೇವರಾಜ ಅರಸು ಚಿಂತನೆಗಳೇ ಮದ್ದು: ಎಚ್.ಕೆ.ಪಾಟೀಲ್

ಬೆಳಗಾವಿ, ಸೆ.18: ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ತಾಂಡವ ವಾಡುತ್ತಿರುವ ಅನಿಷ್ಟಗಳ ನಿವಾರಣೆಗೆ ಮಾಜಿ ಸಿಎಂ ದೇವರಾಜು ಅರಸು ಅವರ ಚಿಂತನೆಯೆ ಸರಿಯಾದ ಮದ್ದು ಎಂದು ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ.ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ರವಿವಾರ ಇಲ್ಲಿನ ಸುವರ್ಣಸೌಧದಲ್ಲಿ ಮಾಧ್ಯಮ ಅಕಾಡಮಿ, ಹಿಂ.ವರ್ಗಗಳ ಕಲ್ಯಾಣ ಇಲಾಖೆ, ದೇವರಾಜು ಅರಸು ಜನ್ಮ ಶತಮಾನೋತ್ಸವ ಸಮಿತಿ, ವಾರ್ತಾ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ 'ಅರಸು ಚಿಂತನೆಗಳು ಮತ್ತು ಮಾಧ್ಯಮ' ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಂದಿನ ಪೀಳಿಗೆಯ ರಾಜಕಾರಣಿಗಳು ಸರಿಯಾದ ಹಾದಿಯಲ್ಲಿ ನಡೆಯಬೇಕಾದರೆ ಅರಸು ಚಿಂತನೆಗಳ ಚಾಟಿ ಏಟು ಆಗಾಗ ಬೀಳುತ್ತಿರಲೇಬೇಕು ಎಂದ ಅವರು, ಅರಸು ಈ ದೇಶ, ಈ ನಾಡು ಕಂಡ ಶ್ರೇಷ್ಠ ಪ್ರಜಾಪ್ರಭುತ್ವವಾದಿ. ಕರ್ನಾಟಕವನ್ನು ಅಭಿವೃದ್ದಿ ಶಕೆಯಲ್ಲಿ ನಿಲ್ಲಿಸಿದ ಧೀಮಂತ ಮತ್ತು ಗಟ್ಟಿ ನಿಲುವು ಹಾಗೂ ಗಟ್ಟಿ ರಾಜಕೀಯ ಇಚ್ಛಾಶಕ್ತಿ ಹೊಂದಿದ್ದ ದೂರದೃಷ್ಟಿಯ ನಾಯಕ ಎಂದು ಬಣ್ಣಿಸಿದರು.
ರಾಜಕೀಯದ ಮೇಲೆ ನಂಬಿಕೆ ಇಟ್ಟು ಸಜ್ಜನರು ರಾಜಕಾರಣಕ್ಕೆ ಬರಬೇಕಾದರೆ ಅರಸು ಅವರ ಹಾದಿಯಲ್ಲಿ ನಡೆಯುವುದು ಬಹಳ ಮುಖ್ಯ, ಪ್ರಜಾಪ್ರಭುತ್ವ ಸಾಮಾನ್ಯ ಜನರಿಂದ ಯಶ್ವಸಿಯಾಗಿ ಆಡಳಿತಕ್ಕೆ ನೆರವಾಗಬೇಕು. ಈ ಕಾರಣದಿಂದ ಉದ್ಯಮ ಪತಿಗಳನ್ನು, ಸಿರಿವಂತರನ್ನು ರಾಜಕೀಯಕ್ಕೆ ಕರೆತಂದರೆ ಅದ್ದರಿಂದ ಬಡವರ ಹಿತ ಸಾಧನೆಯಾಗುವುದಿಲ್ಲ, ಪ್ರಜಾಪ್ರಭುತ್ವದ ಉದ್ದೇಶವು ಸಫಲವಾಗುವುದಿಲ್ಲ ಎಂಬ ನಿಲುವನ್ನು ಅರಸು ಜಾರಿಗೆ ತಂದು ನಿರ್ಮಲ ಮತ್ತು ತಾರತಮ್ಯವಿಲ್ಲದ ಸಮಾಜ ಸೃಷ್ಟ್ಟಿ ಮಾಡಿದರು ಎಂದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, 1970ರ ಯುಗ ಕೇವಲ ಅರಸು ಯುಗ ಅಷ್ಟೇ ಅಲ್ಲ, ಅದು ಕರ್ನಾಟಕ ಪಾಲಿಗೆ ಸುವರ್ಣಯುಗ ಆಗಿತ್ತು. ಇಂದಿರಾ ಗಾಂಧಿ ಅವರ 20ಅಂಶಗಳ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದರು. ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರಿಗೆ ಬದಕು ಕಟ್ಟಿಕೊಟ್ಟರು. ಹಣ, ಜಾತಿ ಮತ್ತು ತೋಳ್ಬಲಕ್ಕೆ ಇತಿಶ್ರೀ ಹಾಡಿದ ಕೀರ್ತಿಯೂ ಅರಸರಿಗೆ ಸಲ್ಲುತ್ತದೆ ಎಂದರು.
ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಮಾತನಾಡಿ, ತಲೆಯ ಮೇಲೆ ಮಲ ಹೊರುವ ಅನಿಷ್ಟ ಪದ್ದತಿಯನ್ನು ನಿಲಿಸಿದ್ದರು ಎಂದರೆ ಅರಸು ಮಾನವೀಯತೆಗೆ ಎಷ್ಟು ಬೆಲೆ ಕೊಡುತ್ತಿದ್ದರು ಎಂಬುದು ಇದಕ್ಕೆ ಸಾಕ್ಷಿ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಸು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ಅರಸು ಕರ್ನಾಟಕ ಕಂಡ ಲೋಹಿಯ ಎಂದು ತಮ್ಮದೆ ಆದ ರೀತಿಯಲ್ಲಿ ಮಂಡಿಸಿದರು. ಕೃಷಿ ಮೂಲದ ಆದಾಯ ಹೊರತುಪಡಿಸಿ ಸರಕಾರ ನೌಕರಿಯಿಂದ ವರ್ಷಕ್ಕೆ 25ಲಕ್ಷ ರೂ.ಸಂಬಳ ಪಡೆಯುವ ಅಧಿಕಾರಿಗಳು, ನೌಕರರಿಗೆ ಕೃಷಿ ಭೂಮಿ ಖರೀದಿಗೆ ಅವಕಾಶ ಕಲ್ಪಿಸಿರುವುದು ಸಲ್ಲ ಎಂದರು.
ಮಾಧ್ಯಮ ಅಕಾಡಮಿ ಅಧ್ಯಕ್ಷ ಎಂ.ಸಿದ್ದರಾಜು ಮಾತನಾಡಿ, ಪತ್ರಕರ್ತರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಅಕಾಡಮಿ ಹ್ಮುಕೊಂಡಿದ್ದು, ಇದನ್ನು ಮುಂದಿನ ತಿಂಗಳು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿಲಿದ್ದಾರೆ. ಪತ್ರಿಕೋದ್ಯಮದಲ್ಲಿ ಬದುಕು ಕಟ್ಟಿಕೊಳ್ಳುವ ಯುವಕರಿಗೆ ಹತ್ತು ತಿಂಗಳ ಕಾಲ ಟಿ.ವಿ.ಮತ್ತು ಪತ್ರಿಕೆಗಳಲ್ಲಿ ತರಬೇತಿ ನೀಡುವುದಲ್ಲದೆ ಪ್ರತೀ ತಿಂಗಳು 10 ಸಾವಿರ ರೂ. ಶಿಷ್ಯವೇತನ ನೀಡಲಾಗುವುದು ಎಂದು ಪ್ರಕಟಿಸಿದರು.
ಅರಸರ ಒಡನಾಡಿಗಳಾಗಿದ್ದ ಬೆಳಗಾವಿ ಮಾಜಿ ಸಂಸದ ಎಸ್.ಪಿ.ಸಿದ್ನಾಳ, ಮುದ್ದೇಬಿಹಾಳದ ಮಾಜಿ ಶಾಸಕ ಎಂ.ಎಂ.ಸಜ್ಜನ, ಮೇಲ್ಮನೆ ಸದಸ್ಯ ವೀರಣ್ಣ ಮತ್ತಿಕಟ್ಟಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಬಡವರ ಹಿತ, ಸಮಾಜದ ಹಿತ ಕಾಪಾಡುವ ವಿಚಾರ ಬಂದಾಗ ಅರಸು ಅವರು ತಮ್ಮ ಕುರ್ಚಿಯ ಭಯವನ್ನು ಲೆಕ್ಕಿಸದೆ ಖಡಕ್ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಿದ್ಧ ಹಸ್ತರಾಗಿದ್ದರು. ರಾಜಕೀಯ ಜೀವನದ ಕೊನೆಯವರೆಗೂ ಕಾಂಗ್ರೆಸ್ ನನ್ನ ಮನೆ, ಅಲ್ಲಿನ ನಾಯಕರು ಪದಾಧಿಕಾರಿಗಳೇ ನನ್ನ ಅಣ್ಣ-ತಮ್ಮಂದಿರು ಎಂಬ ಬದ್ಧತೆ ಇಟ್ಟುಕೊಂಡಿದ್ದ ಅಪರೂಪದ ರಾಜಕಾರಣಿ ಅರಸು.
ಎಸ್.ಬಿ.ಸಿದ್ನಾಳ, ಮಾಜಿ ಸಂಸದ





