ವಿದ್ಯಾರ್ಥಿಯಿಂದ ಕುಡಿದು ಕಾರು ಚಾಲನೆ: ಓರ್ವ ಬಲಿ, 10 ಮಂದಿಗೆ ಗಾಯ

ಚೆನ್ನೈ, ಸೆ.19: ಸೋಮವಾರ ಬೆಳಗ್ಗಿನ ಜಾವ ಕುಡಿದ ಅಮಲಿನಲ್ಲಿ ಪೋರ್ಶ್ ಕಾರು ಚಾಲನೆ ಮಾಡಿದ ವಿದ್ಯಾರ್ಥಿಯೊಬ್ಬ ಓರ್ವ ವ್ಯಕ್ತಿಯನ್ನು ಬಲಿ ಪಡೆದು, ಇತರ 11 ಮಂದಿಯನ್ನು ಗಾಯಗೊಳಿಸಿದ ಘಟನೆ ನಡೆದಿದೆ.
ಟಿ. ನಗರ ನಿವಾಸಿ, ವಿದ್ಯಾರ್ಥಿ ವಿಕಾಸ್ ವಿಜಯಾನಂದ ಎಂಬಾತ ಸ್ನೇಹಿತ ಚರಣ್ ಕುಮಾರ್‌ನೊಂದಿಗೆ ಬೆಳಗ್ಗಿನ ಜಾವ ಪಾರ್ಟಿ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ್ದಾನೆ. ನಿಯಂತ್ರಣದ ತಪ್ಪಿದ ಕಾರು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಸುಮಾರು 12 ರಿಕ್ಷಾಗಳಿಗೆ ಢಿಕ್ಕಿ ಹೊಡೆದಿದೆ. ನೀಲಿ ಬಣ್ಣದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ರಿಕ್ಷಾದಲ್ಲಿ ಮಲಗಿದ್ದವ ಹಲವರಿಗೆ ಗಾಯವಾಗಿದ್ದು, ಗಂಭೀರ ಗಾಯಗೊಂಡಿದ್ದ ಚಾಲಕ ಅರ್ಮುಗಮ್ ಎಂಬಾತ ರಾಜೀವ್ ಗಾಂಧಿ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದಾನೆ.
‘‘ಸುಪ್ರೀಂಕೋರ್ಟ್‌ನ ವಕೀಲರಾದ ವಿಜಯ್ ಆನಂದ್ ಪುತ್ರನಾಗಿರುವ ವಿಕಾಸ್ ಹಾಗೂ ಆತನ ಸ್ನೇಹಿತ ಚರಣ್ ಕುಡಿದು ಕಾರು ಚಲಾಯಿಸುತ್ತಿದ್ದರು. ಈ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ.





