ದೋನಿ ವಿರುದ್ಧ ಹೊಸ ಬಾಣ ಬಿಟ್ಟ ಗಂಭೀರ್

ಹೊಸದಿಲ್ಲಿ,ಸೆ.19 : ಕ್ರಿಕೆಟಿಗರ ಜೀವನದ ಮೇಲೆ ಸಿನೆಮಾಗಳನ್ನು ಮಾಡುವ ಬದಲು ದೇಶದ ಜನರ ಕಲ್ಯಾಣಕ್ಕಾಗಿ ಶ್ರಮಿಸಿದಂತಹವರ ಜೀವನಾಧರಿತ ಸಿನೆಮಾಗಳನ್ನು ನಿರ್ಮಿಸಬೇಕೆಂದು ಹೇಳಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಮ್ ಇಂಡಿಯಾದಟಿ-20 ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಹೊಸ ಬಾಣ ಬಿಟ್ಟಿದ್ದಾರೆ. ಧೋನಿ ಜೀವನಾಧರಿತ ಚಿತ್ರ ತೆರೆ ಕಾಣಲು ಕೆಲವೇ ದಿನಗಳಿರುವಾಗ ಗಂಭೀರ್ ಅವರಿಂದ ಬಂದಿರುವ ಹೇಳಿಕೆ ಸಾಕಷ್ಟು ವಿವಾದಕ್ಕೀಡಾಗಲಿದೆಯೆಂಬುದು ಸ್ಪಷ್ಟ.
‘ಎಂ ಎಸ್ ಧೋನಿ : ದಿ ಅನ್ ಟೋಲ್ಡ್ ಸ್ಟೋರಿ’ ಎಂಬ ಹೆಸರಿನ ಸಿನೆಮಾದಲ್ಲಿ ಧೋನಿ ಪಾತ್ರವನ್ನುಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ ಪುತ್ ಮಾಡಿದ್ದಾರೆ. ಸೆಪ್ಟಂಬರ್ 20 ರಂದು ಈ ಚಿತ್ರ ತೆರೆ ಕಾಣಲಿದ್ದು ಬಡ ಕುಟುಂಬದಿಂದ ಬಂದ ಹುಡುಗನೊಬ್ಬ ಮುಂದೆ ಕ್ರಿಕೆಟಿಗನಾಗಿ ಅಗರ್ಭ ಶ್ರೀಮಂತನಾಗುವ ಚಿತ್ರಣವನ್ನು ಪ್ರೇಕ್ಷಕರ ಮುಂದೆತೆರೆದಿಡಲಿದೆ. ಧೋನಿ ತವರೂರಾದ ರಾಂಚಿಯಲ್ಲಿ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ.
‘‘ಕ್ರಿಕೆಟಿಗರ ಜೀವನಾಧರಿತ ಸಿನೆಮಾಗಳ ಮೇಲೆ ನನಗೆ ನಂಬಿಕೆ ಇಲ್ಲ. ಕ್ರಿಕೆಟಿಗರಿಗಿಂತಲೂ ದೇಶಕ್ಕಾಗಿ ಹೆಚ್ಚು ಸೇವೆ ಸಲ್ಲಿಸಿದವರು ಇಂತಹ ಸಿನೆಮಾಗಳಿಗೆ ಅರ್ಹರು’’ ಎಂದು ಗಂಭೀರ್ ಟ್ವಿಟ್ಟರಿನಲ್ಲಿ ಹೇಳಿಕೊಂಡಿದ್ದಾರೆ.
ಗಂಭೀರ್ ಹೇಳಿಕೆ ಒಂದು ವಿಧದಲ್ಲಿ ಅರ್ಥಗರ್ಭಿತವಾಗಿದ್ದರೂ ಇನ್ನೊಂದು ವಿಧದಲ್ಲಿ ಅದು ತಮ್ಮ ಮಾಜಿ ಸಹೋದ್ಯೋಗಿ ಧೋನಿಯೊಂದಿಗೆ ಅವರಿಗಿದ್ದ ಸಿಹಿ-ಕಹಿ ಸಂಬಂಧದ ಹಿನ್ನೆಲೆಯಲ್ಲಿ ಧೋನಿಗೆ ಗುರಿಯಿಟ್ಟ ಬಾಣವೆಂದೇ ಹೇಳಬಹುದು. ದುಲೀಪ್ ಟ್ರೋಫಿ ಪಂದ್ಯಾಟದಲ್ಲಿ ಸಾಕಷ್ಟು ರನ್ ಗಳಿಸಿದ್ದರೂ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಗಂಭೀರ್ ಆಯ್ಕೆಯಾಗಿಲ್ಲ.
ಭಾರತ ತಂಡದ ಮಾಜಿ ಕಪ್ತಾನ ಮುಹಮ್ಮದ್ ಅಜರುದ್ದೀನ್ ಅವರ ಜೀವನಾಧರಿತ ‘ಅಝರ್’ ಚಿತ್ರಈ ವರ್ಷಾರಂಭದಲ್ಲಿ ತೆರೆ ಕಂಡಿದ್ದರೆ,ದಕ್ಷಿಣ ಆಫ್ರಿಕಾದ ಮಾಜಿ ಕಪ್ತಾನ ಹಾನ್ಸೀ ಕ್ರೋಂಜೆ ಅವರಜೀವನ ಕಥೆ‘ಹ್ಯಾನ್ಸೀ : ಎ ಟ್ರೂ ಸ್ಟೋರಿ’’ 2008 ರಲ್ಲಿ ಬಿಡುಗಡೆಯಾಗಿತ್ತು.
ಸಚಿನ್ ತೆಂಡುಲ್ಕರ್ ಅವರ ಜೀವನಾಧರಿತ ಸಿನೆಮಾ ‘ಸಚಿನ್ -ಎ ಬಿಲಿಯನ್ ಡ್ರೀಮ್ಸ್’ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ.







