ಈ ಸೌದಿ ಅರೇಬಿಯಾ ಬಾಲಕಿ ಏನು ಮಾಡಲು ಹೊರಟಿದ್ದಾಳೆ ಗೊತ್ತೇ

ಕೊಲ್ಕತ್ತಾ, ಸೆ.19: ಇಂಟರ್ನೆಟ್ ಯುಗದಲ್ಲಿ ಇಮೋಜಿ ಸಾಮಾನ್ಯ. ಆದರೆ ಈ ಒಂದು ನಿರ್ದಿಷ್ಟ ಇಮೋಜಿಯ ಹಿಂದೆ ಕೇವಲ ತಮಾಷೆಯಿರದೆ ಕೆಲ ಗಂಭೀರ ವಿಚಾರಗಳಿವೆಯೆಂದು ತಿಳಿಯುತ್ತದೆ.
ಸೌದಿ ಅರೇಬಿಯ ಮೂಲದ ಹಾಗೂ ಪ್ರಸಕ್ತ ಜರ್ಮನಿಯಲ್ಲಿ ವಾಸಿಸುತ್ತಿರುವ 15 ವರ್ಷದ ಬಾಲಕಿ ತಾನು ಹಿಜಾಬ್ ಧರಿಸಿದ ಮಹಿಳೆಯ ಇಮೋಜಿ ಮಾಡುತ್ತೇನೆಂದು ಹೇಳಿದ್ದಾಳೆ. ರಯ್ಯೋಫ್ ಅಲ್ ಹುಮೇಧಿ ಎಂಬ ಹೆಸರಿನ ಈ ಬಾಲಕಿ ತನ್ನ ಪ್ರಸ್ತಾವನೆಯನ್ನು ಹೊಸ ಇಮೋಜಿಗಳನ್ನು ರಚಿಸಿ ಅವುಗಳನ್ನು ಪರೀಕ್ಷಿಸುವ ಸಂಸ್ಥೆ ಯೂನಿಕೋಡ್ ಗೆ ಪ್ರಸ್ತಾಪವೊಂದನ್ನು ಸಲ್ಲಿಸಿದ್ದಾಳೆಂದು ಬಿಬಿಸಿ ವರದಿಯೊಂದು ತಿಳಿಸಿದೆ.
ತನ್ನ ಪ್ರಸ್ತಾವನೆಯಲ್ಲಿ ಆಕೆ 'ಕೆಫಿಯಾ' ಧರಿಸಿದ ಪುರುಷರ ಇಮೋಜಿಗಳನ್ನೂ ರಚಿಸುವುದಾಗಿ ಹೇಳಿಕೊಂಡಿದ್ದಾಳೆ.
ಹಿಜಾಬ್ ಧರಿಸುವ ತನ್ನಂಥವರನ್ನು ಪ್ರತಿನಿಧಿಸುವ ಇಮೋಜಿ ಇಲ್ಲವೆಂದು ಸ್ನೇಹಿತರ ಜತೆ ಗ್ರೂಪ್ ಚ್ಯಾಟ್ ಮಾಡುವಾಗ ಆಕೆಯ ಅರಿವಿಗೆ ಬಂದಿತ್ತು. ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್ ಹಾಗೂ ಈಜುವಾಗ ಧರಿಸುವ ಬುರ್ಕಿನಿ ವಿಚಾರದಲ್ಲಿ ಈಗಾಗಲೇ ಸಾಕಷ್ಟು ವಾದವಿವಾದಗಳಿದ್ದರೂ ರಯ್ಯೋಫ್ ಪ್ರಕಾರ ವಿಶ್ವದಾದ್ಯಂತ ಸುಮಾರು 550 ಮಿಲಿಯನ್ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುತ್ತಿದ್ದು ಹಿಜಾಬ್ ಧರಿಸಿರುವ ಮಹಿಳೆಯ ಇಮೋಜಿ ಸೃಷ್ಟಿಸಿದರೆ ಅದು ಸಮಾಜದಲ್ಲಿ ಸಹಿಷ್ಣುತೆ ಹಾಗೂ ವೈವಿಧ್ಯತೆಯ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿರಿಸಿದಂತಾಗುವುದು ಎಂದು ಯುನಿಕೋಡ್ ಗೆ ಕಳುಹಿಸಿರುವ ತನ್ನ ಏಳು ಪುಟಗಳ ಪ್ರಸ್ತಾವನೆಯಲ್ಲಿ ಆಕೆ ಹೇಳಿದ್ದಾಳೆ.
ಆಕೆಯ ಪ್ರಸ್ತಾಪ ರೆಡ್ಡಿಟ್ ಸಂಸ್ಥೆಯನ್ನೂ ಆಕರ್ಷಿಸಿದ್ದು ಅದರ ಸಹ ಸ್ಥಾಪಕ ಅಲೆಕ್ಸಿಸ್ ಒಹೇನಿಯನ್ ಆಕೆಗಾಗಿ ಒಂದು ರೆಡ್ಡಿಟ್ ಅಧಿವೇಶನವನ್ನೂ ಆಯೋಜಿಸಿದ್ದರು. ಈ ಸಂದರ್ಭ ಅನೇಕ ಪ್ರಶ್ನೆಗಳಿಗೆ ಉತ್ತಿರಿಸಿದ ರಯ್ಯೋಫ್, ‘‘ಹಿಜಾಬ್ ಧರಿಸುವುದರಿಂದ ತನಗೆ ಶಕ್ತಿ ದೊರೆಯುತ್ತದೆ. ಇದು ಆಶ್ಚರ್ಯವೆನಿಸಿದರೂ ಇದರಿಂದ ನನಗೆ ಸ್ವಾತಂತ್ರ್ಯ ದೊರೆತ ಅನುಭವವಾಗುತ್ತದೆ. ಮಹಿಳೆಯೊಬ್ಬಳನ್ನು ಆಕೆಯ ಸೌಂದರ್ಯದಾಚೆ ಆಕೆಯ ಬುದ್ಧಿಮತ್ತೆಗಾಗಿ ಗಮನಿಸಬೇಕು’’ ಎಂದು ಆಕೆ ಹೇಳುತ್ತಾಳೆ







