ಕಾಶ್ಮೀರ; ಮಹಾ ಮೌನಿ ಪ್ರಧಾನಿ ಮಾತನಾಡಲಿ : ಯು. ಟಿ. ಖಾದರ್

ಮಂಗಳೂರು, ಸೆ.19: ಕಾಶ್ಮೀರದ ವಿಚಾರದ ಕುರಿತು ಬಿಜೆಪಿಗರು ಹಿಂದಿನ ಯುಪಿಎ ಸರಕಾರದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೌನಿ ಎಂದು ವ್ಯಂಗ್ಯವಾಡುತ್ತಿದ್ದರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರ ವಿಚಾರದಲ್ಲಿ ಮಹಾಮೌನಿಯಾಗಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಕಾಶ್ಮೀರದ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪಾಕ್ ಪ್ರಧಾನಿಯನ್ನು ಕರೆದಿದ್ದಾರೆ. ಆಮಂತ್ರಣವಿಲ್ಲದೆ ಪಾಕ್ ಪ್ರಧಾನಿಯ ಮಗಳ ಮದುವೆಯಲ್ಲಿ ಭಾಗವಹಿಸಿ ಬಂದಿದ್ದಾರೆ. ಅವಕಾಶ ಸಿಕ್ಕಲ್ಲೆಲ್ಲಾ ಮಾತುಕತೆ ನಡೆಸಿದ್ದಾರೆ, ಹರಟೆ ಹೊಡೆದಿದ್ದಾರೆ. ಇಷ್ಟೆಲ್ಲಾ ಆಗುವವರೆಗೂ ಇಂತಹ ಸೂಕ್ಷ್ಮ ವಿಚಾರ ಅವರಿಗೆ ತಿಳಿದಿರಲಿಲ್ಲವೇ ಎಂದು ವ್ಯಂಗ್ಯವಾಡಿದರು.
ಈ ವಿಚಾರ ಇಷ್ಟೊಂದು ಗಂಭೀರ ಸ್ವರೂಪ ಪಡೆದುಕೊಳ್ಳುವವರೆಗೂ ಪ್ರಧಾನಿ ಏನು ಮಾಡುತ್ತಿದ್ದರು? ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ ಖಾದರ್ ಇನ್ನಾದರೂ ಪ್ರಧಾನಿ ಮೋದಿ ಅವರು ಪಾಕಿಸ್ತಾನದ ಬಗ್ಗೆ ತಮ್ಮ ನಿಲುವು ಏನೆಂದು ದೇಶದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಉರಿಯಲ್ಲಿ ನಡೆದ ಘಟನೆ ದೇಶದ ವೈಫಲ್ಯ. ಇದರಿಂದ ದೇಶದ ಜನರ ಹಾಗೂ ಸೈನಿಕರ ಮಾನಸಿಕ ಸ್ಥೈರ್ಯ ಕುಸಿಯುವಂತಾಗಿದೆ. ಹೀಗಾಗಿ ಇನ್ನಾದರೂ ಮೋದಿ ಅವರು ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಾಳಬೇಕಿದೆ ಎಂದು ಹೇಳಿದರು.







