ಪುತ್ತೂರು: ಡೆತ್‌ನೋಟ್ ಬರೆದಿಟ್ಟು ವೃದ್ಧ ಆತ್ಮಹತ್ಯೆ

ಪುತ್ತೂರು, ಸೆ.19: ‘‘ತಾನು ಸತ್ತ ಬಳಿಕ ತನ್ನ ಹೆಣವನ್ನು ಚರ್ಚ್‌ಗೆ ಕೊಂಡೊಯ್ಯಬಾರದು ಮತ್ತು ತನ್ನ ಮೃತದೇಹದ ಅಂತಿಮ ವಿಧಿ ವಿಧಾನಗಳನ್ನು ತನ್ನ ಪತ್ನಿಯೇ ಮಾಡಬೇಕು’’ ಎಂದು ಡೆತ್ ನೋಟ್ ಬರೆದಿಟ್ಟು ವೃದ್ದರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿ ನಡೆದಿದೆ.
ಎಸ್. ಕುರಿಯಾಸ್ (65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಹಾರಾಷ್ಟ್ರದ ನಾಗಪುರದಲ್ಲಿ ಕಾಲೇಜು ಉಪನ್ಯಾಸಕರಾಗಿದ್ದ ಮೃತರು ನಿವೃತ್ತರಾದ ಬಳಿಕ ಕಳೆದ 5 ವರ್ಷಗಳಿಂದ ಪುತ್ತೂರು ತಾಲೂಕಿನ ಕುರಿಯದಲ್ಲಿ ಮನೆ ಖರೀದಿಸಿದ್ದು ಅಲ್ಲಿ ಎರಡು ವರ್ಷ ವಾಸ್ತವ್ಯವಿದ್ದರು. ಬಳಿಕ ಅಲ್ಲಿನ ಜಾಗವನ್ನು ಮಾರಾಟ ಮಾಡಿ ಸರ್ವೆಯಲ್ಲಿ ಜಾಗ ಖರೀದಿ ಮಾಡಿದ್ದರು. ಸರ್ವೆಯಲ್ಲಿರುವ ಜಾಗವನ್ನು ಕಳೆದ ಎರಡು ತಿಂಗಳ ಹಿಂದೆ ಮಾರಾಟ ಮಾಡಿ ತಿಂಗಳಾಡಿಯಲ್ಲಿ ಹೊಸ ಜಾಗವನ್ನು ಖರೀದಿ ಮಾಡಿದ್ದರು. ಈ ನಡುವೆ ತಿಂಗಳಾಡಿಯಲ್ಲಿ ಮನೆ ಖರೀದಿ ಮಾಡದಂತೆ ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಮೃತರ ಪುತ್ರ ಕೇಳಿಕೊಂಡಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಹೊಸ ಮನೆಯ ಗೃಹಪ್ರವೇಶ ನಡೆದಿತ್ತು.
ಮೃತರ ಪತ್ನಿ ಜಸ್ಮಿ ಕುರಿಯಾಸ್ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





