ಖಟ್ಟರ್‌ರ ಮೇವಾತ್ ಹೇಳಿಕೆ ಬಿಜೆಪಿ ನಾಯಕರ ನಿಜವಾದ ಬಣ್ಣ ತೋರಿಸಿದೆ: ಮಾಯಾವತಿ

ಲಕ್ನೋ,ಸೆ.19: ಮೇವಾತ್ ಸಾಮೂಹಿಕ ಅತ್ಯಾಚಾರ ಮತ್ತು ಜೋಡಿ ಕೊಲೆ ಪ್ರಕರಣವನ್ನು ‘ಸಣ್ಣ ವಿಷಯ’ವೆಂದು ಬಣ್ಣಿಸಿದ್ದಕ್ಕಾಗಿ ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರನ್ನು ಸೋಮವಾರ ತೀವ್ರ ತರಾಟೆಗೆತ್ತಿಕೊಂಡ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು, ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ‘ಮಹಿಳಾ ವಿರೋಧಿ ’ ಮನಸ್ಥಿತಿಯನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೂಚಿಸಿದ್ದಾರೆ.
ಇಂತಹ ತಪ್ಪು ಮತ್ತು ಮಹಿಳಾ ವಿರೋಧಿ ಹೇಳಿಕೆಯು ಬಿಜೆಪಿ ನಾಯಕರ ನಿಜವಾದ ಗುಣ ಮತ್ತು ಮುಖಗಳನ್ನು ಬಯಲಿಗೆಳೆದಿದೆ ಎಂದು ಹೇಳಿಕೆಯೊಂದರಲ್ಲಿ ಝಾಡಿಸಿದ್ದಾರೆ.
ಮೋದಿಯವರು ತನ್ನ ‘ಬೇಟಿ ಬಚಾವೋ ಬೇಟಿ ಪಢಾವೊ’ ಅಭಿಯಾನವನ್ನು ಹರ್ಯಾಣದಿಂದಲೇ ಆರಂಭಿಸಿದ್ದರು, ಆದರೆ ಆ ರಾಜ್ಯದ ಮುಖ್ಯಮಂತ್ರಿ ಮಹಿಳೆಯರ ಬಗ್ಗೆ ಯಾವುದೇ ಗೌರವ ತೋರಿಸುತ್ತಿಲ್ಲ. ಪ್ರಧಾನಿಯವರು ಇದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ ಅವರ ಇಂತಹುದೇ ಹೇಳಿಕೆಯನ್ನು ನೆನಪಿಸಿರುವ ಅವರು,ಇಂತಹ ಮನಸ್ಥಿತಿಯಿಂದಾಗಿಯೇ ಉತ್ತರ ಪ್ರದೇಶದಲ್ಲಿ ದೌರ್ಜನ್ಯ ಮತ್ತು ಅತ್ಯಾಚಾರಗಳಂತಹ ಘಟನೆಗಳು ಸಾಮಾನ್ಯವಾಗಿಬಿಟ್ಟಿವೆ ಎಂದಿದ್ದಾರೆ.
2014ರಲ್ಲಿ ಅತ್ಯಾಚಾರಕ್ಕೆ ಮರಣ ದಂಡನೆಯನ್ನು ವಿರೋಧಿಸಿದ್ದ ಸಂದರ್ಭ ಮುಲಾಯಂ ಅವರು, ‘ಹುಡುಗರು ಹುಡುಗರೇ...ಅವರಿಂದ ತಪ್ಪುಗಳಾಗುತ್ತವೆ’ ಎಂದು ಹೇಳಿದ್ದರು.
ಮಹಿಳಾ ವಿರೋಧಿ ಧೋರಣೆಯನ್ನು ಹೊಂದಿರುವವರ ವಿರುದ್ಧ ಸಿಡಿದೇಳುವಂತೆ ಅವರು ಜನತೆಗೆ ಕರೆ ನೀಡಿದ್ದಾರೆ.







