ಆದೇಶವಿದ್ದರೂ ಅಂಗವಿಕಲ ಬಾಲಕನಿಗೆ ಪ್ರವೇಶ ನೀಡದ ಶಾಲೆಗೆ ಹೈಕೋರ್ಟ್ ತರಾಟೆ

ಹೊಸದಿಲ್ಲಿ,ಸೆ.19: ನ್ಯಾಯಾಲಯದ ಆದೇಶವಿದ್ದರೂ ಅಂಗವಿಕಲ ಬಾಲಕನೋ ರ್ವನನ್ನು ಆರ್ಥಿಕವಾಗಿ ದುರ್ಬಲ ವರ್ಗ ವಿಭಾಗದಡಿ ಒಂದನೇ ತರಗತಿಗೆ ಪ್ರವೇಶವ ನ್ನೇಕೆ ನೀಡುತ್ತಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ಇಲ್ಲಿಯ ಖಾಸಗಿ ಶಾಲೆಯೊಂದನ್ನು ತರಾಟೆಗೆತ್ತಿಕೊಂಡಿತು.
ಈ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠವು ಬಾಲಕನಿಗೆ ಪ್ರವೇಶ ನೀಡುವಂತೆ ಆದೇಶಿಸಿದೆ ಎಂದು ಬೆಟ್ಟು ಮಾಡಿದ ಮುಖ್ಯ ನ್ಯಾಯಧೀಶೆ ಜಿ.ರೋಹಿಣಿ ಮತ್ತು ನ್ಯಾ.ಸಂಗೀತಾ ಧಿಂಗ್ರಾ ಅವರ ವಿಭಾಗೀಯ ಪೀಠವು, ಆದೇಶವನ್ನೇಕೆ ಪಾಲನೆ ಮಾಡಿಲ್ಲವೆಂದು ಸಿದ್ಧಾರ್ಥ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ್ನು ಪ್ರಶ್ನಿಸಿತು.
ಅಂಗವಿಕಲ ಬಾಲಕನಿಗೆ ವಯಸ್ಸಿನ ಮಿತಿಯನ್ನು ಸಡಿಲಿಸಿ ಆರ್ಥಿಕವಾಗಿ ದುರ್ಬಲ ವರ್ಗಗಳ ಶೇ.25ರ ಕೋಟಾದಲ್ಲಿ ಒಂದನೇ ತರಗತಿಗೆ ಪ್ರವೇಶ ನೀಡುವಂತೆ ಮೋಟಾರು ಅಪಘಾತಗಳ ಹಕ್ಕುಕೋರಿಕೆ ನ್ಯಾಯಾಧಿಕರಣವು ಸಿದ್ಧಾರ್ಥ ಶಾಲೆಗೆ ಆದೇಶಿಸಿತ್ತು. ಇದರ ವಿರುದ್ಧ ಅದು ಹೈಕೋರ್ಟ್ ಮೆಟ್ಟಿಲನ್ನೇರಿತ್ತು. ಮಗುವಿನ ತಾಯಿಯ ಕೋರಿಕೆಯ ಮೇರೆಗೆ ಈ ಆದೇಶವನ್ನು ಹೊರಡಿಸಲು ನ್ಯಾಯಾಧಿಕರಣಕ್ಕೆ ಅಧಿಕಾರ ವ್ಯಾಪ್ತಿಯಿಲ್ಲ ಎಂಬ ಅದರ ವಾದವನ್ನು ಒಪ್ಪಿಕೊಂಡಿದ್ದ ಏಕ ನ್ಯಾಯಾಧೀಶ ಪೀಠವು ಅದನ್ನು ತಳ್ಳಿ ಹಾಕಿತ್ತಾದರೂ,ಮಗುವಿಗೆ ಪ್ರವೇಶ ನೀಡುವಂತೆ ಆ.26ರಂದು ತನ್ನ ಹೊಸ ಆದೇಶದಲ್ಲಿ ತಿಳಿಸಿತ್ತು. ಇದರ ವಿರುದ್ಧ ಶಾಲೆಯು ಮೇಲ್ಮನವಿಯನ್ನು ಸಲ್ಲಿಸಿದೆ.
ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟಾದಲ್ಲಿ ಸೀಟುಗಳು ಮುಗಿದಿವೆ ಮತ್ತು ರಿಟ್ ಅರ್ಜಿ ವಿಚಾರಣೆಗೆ ಬಾಕಿ ಇದ್ದ ಅವಧಿಯಲ್ಲಿ ಬಾಲಕನಿಗೆ ಬೇರೊಂದು ಶಾಲೆಯಲ್ಲಿ ಪ್ರವೇಶ ದೊರಕಿದೆ ಎಂದು ಅದು ತನ್ನ ಅರ್ಜಿಯಲ್ಲಿ ವಾದಿಸಿದೆ. ತನ್ನ ತೀರ್ಪನ್ನು ಕಾಯ್ದಿರಿಸಿದ ವಿಭಾಗೀಯ ಪೀಠವು, ಅರ್ಜಿಯಲ್ಲಿ ಎತ್ತಲಾಗಿರುವ ಎಲ್ಲ ವಿಷಯಗಳನ್ನು ಪರಿಶೀಲಿಸಿದ ಬಳಿಕ ಆದೇಶವನ್ನು ಹೊರಡಿಸುವುದಾಗಿ ತಿಳಿಸಿತು.







