ಎಂಪಿಎಂ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಆಗ್ರಹ
ಶಿವಮೊಗ್ಗ, ಸೆ.19: ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿರುವ ಸರಕಾರಿ ಸ್ವಾಮ್ಯದ ಪ್ರತಿಷ್ಠಿತ ಎಂಪಿಎಂ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ರಾಜ್ಯ ಸರಕಾರ ತ್ವರಿತಗತಿಯ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಂಪಿಎಂ ಸಕ್ಕರೆ ಕಾರ್ಖಾನೆ ಪುನರಾರಂಭದ ಬಗ್ಗೆ ಮುಂದಿನ ಒಂದು ವಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯ ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ ಮುಂಭಾಗ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಎಂಪಿಎಂ ಆಡಳಿತ ವರ್ಗವು ಕಬ್ಬು ಅರೆಯುವ ಒಪ್ಪಂದವನ್ನು ಕೆಲ ರೈತರ ಜೊತೆ ಮಾಡಿಕೊಂಡಿದೆ. ಅದೇ ರೀತಿಯಲ್ಲಿ ಉಳಿದ ರೈತರ ಜೊತೆಯೂ ಒಪ್ಪಂದ ಮಾಡಿಕೊಳ್ಳಬೇಕು. ಈ ಮೂಲಕ ಕಬ್ಬು ಅರೆಯುವುದನ್ನು ಆರಂಭಿಸಿ ರೈತರಿಗೆ ನೆರವಾಗಬೇಕೆಂದರು. 2010-11ನೆ ಸಾಲಿನಿಂದ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿಗೆ ಶೇ.15ರ ಬಡ್ಡಿ ಸೇರಿಸಿ ಪಾವತಿಸಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭ ಹಂಚಿಕೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಬೇಕು. ರಾಜ್ಯದ ಕಬ್ಬು ಬೆಳೆಗಾರರಿಗೆ ನೂರು ಕೋಟಿಗೂ ಹೆಚ್ಚಿನ ಹಣ ಪಾವತಿಗೆ ಬಾಕಿ ಇದ್ದು, ಅದು ಶೀಘ್ರ ಪಾವತಿಗೆ ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಒಗ್ಗಟ್ಟಿನ ತೀರ್ಮಾನದಂತೆ 4 ತಿಂಗಳ ಹಿಂದೆ ಕಬ್ಬಿನ ಬೆಳೆ ರಜಾವರ್ಷ ಘೋಷಣೆಯ ಪರಿಣಾಮ ರಾಜ್ಯದಲ್ಲಿ ಶೇ.40ರಷ್ಟು ಬೆಳೆ ಉತ್ಪಾದನೆ ಕಡಿಮೆಯಾಗಿದೆ. ಕಾರ್ಖಾನೆಗಳು ಪ್ರಸಕ್ತ ಸಾಲಿನಲ್ಲಿ ಕಬ್ಬು ಖರೀದಿಸಲು ಪೈಪೋಟಿ ನಡೆಸುವಂತಾಗಿದೆ ಎಂದರು. ವಿಫಲ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಮರ್ಪಕವಾದ ಮಾಹಿತಿ ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಹಾಗೆಯೇ ರಾಜ್ಯದ ಪರ ವಕೀಲರ ಅಸಮರ್ಪಕ ನಡವಳಿಕೆಯಿಂದ ರಾಜ್ಯಕ್ಕೆ ವ್ಯತಿರಿಕ್ತವಾದ ತೀರ್ಪು ಹೊರಬಂದಿದೆ. ಇದರಿಂದ ಕಾವೇರಿ ಜಲಾಶಯ ಬರಿದಾಗುವಂತಾಗಿದೆ. ಕೂಡಲೇ ರಾಜ್ಯ ಸರಕಾರ ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿನ ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಸಂಚಾಲಕ ಎಚ್.ಎನ್.ದೇವಕುಮಾರ್, ಸಂಘಟನಾ ಕಾರ್ಯದರ್ಶಿ ಅತ್ತಿಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಗೊಂಧಿ ಜಯರಾಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







