ಸ್ವಚ್ಛ ರೆಲು-ಸ್ವಚ್ಛ ಭಾರತ್ ಸಪ್ತಾಹ

ತರೀಕೆರೆ, ಸೆ.19: ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆ ಮತ್ತು ತರೀಕೆರೆ ರೈಲ್ವೇಸ್ ಇವುಗಳ ಆಶ್ರಯದಲ್ಲಿ ಭಾರತೀಯ ರೈಲ್ವೆಯು ಸ್ವಚ್ಛ ಭಾರತ್ ಅಭಿಯಾನದಡಿ ಸೆಪ್ಟಂಬರ್ 17 ರಿಂದ 25ರ ವರೆಗಿನ ಸ್ವಚ್ಛತಾ ಸಪ್ತಾಹದ ಅಂಗವಾಗಿ ಆಚರಿಸುತ್ತಿರುವ ಸ್ವಚ್ಛ ರೈಲು-ಸ್ವಚ್ಛಭಾರತ್ ಕಾರ್ಯಕ್ರಮವನ್ನು ಪಟ್ಟಣದ ರೈಲು ನಿಲ್ದಾಣದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮೈಸೂರಿನ ಡಿಎಸ್‌ಸಿ ಪಿ.ಕೆ. ಪಾಂಡಾ ಅವರು ಸ್ವಚ್ಛತಾ ಕುರಿತಾಗಿ ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸುತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಸ್ವಚ್ಛತಾ ಕಾರ್ಯ ಸಕಲ ನಾಗರಿಕರ ನಿತ್ಯದ ಕೆಲಸವಾಗಬೇಕು. ಈ ಆಚರಣೆ ಪ್ರಧಾನಿ ಮೋದಿ ಅವರ ಕನಸು ಮತ್ತು ಆದರ್ಶವಾಗಿದೆ. ಜನರಲ್ಲಿ ಇಂತಹ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿದರೆ ಪರಿಸರವನ್ನು ಸ್ವಚ್ಛವಾಗಿಡಬಹುದು ಎಂದರು. ಇದೇ ಸಂದರ್ಭ ಶಾಲಾ ಮಕ್ಕಳು ತರೀಕೆರೆಯ ರೈಲು ನಿಲ್ದಾಣದ ಉನ್ನತೀಕರಣಕ್ಕಾಗಿ, ಪ್ರತ್ಯೇಕ ಶೌಚಾಲಯ, ಮಹಿಳಾ ಪ್ರಯಾಣಿಕರಿಗಾಗಿ ವಿಶ್ರಾಂತಿ ಗೃಹ ಹಾಗೂ ಪ್ಲಾಟ್‌ಫಾರಂನ ಎತ್ತರಗೊಳಿಸುವ ಬೇಡಿಕೆಯಿಟ್ಟು ಮೈಸೂರಿನ ಡಿಎಸ್‌ಸಿ ಪಿ.ಕೆ. ಪಾಂಡಾ ಅವರಿಗೆ ಮನವಿ ಸಲ್ಲಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಶಶಾಂಕ್, ರೈಲ್ವೆ ಅಧಿಕಾರಿಗಳಾದ ಎಸ್.ಐ ಶ್ರೀನಿವಾಸ್, ಭದ್ರಾವತಿಯ ರೈಲ್ವೆ ಎಎಸ್ಸೈ ಎಸ್.ಗೋವಿಂದ ರಾಜು, ತರೀಕೆರೆಯ ರೈಲು ನಿಲ್ದಾಣ ಅಧೀಕ್ಷಕ ಆನಂದ ಪೂಜಾರಿ, ನಿಲ್ದಾಣಾಧಿಕಾರಿಗಳಾದ ಆರ್. ಕೆ. ಚೌರಾಸಿಯಾ, ಕ್ರಿಪಾನಧಿಯನ್, ಬಿಶ್ವಾಸ್ ನಂದಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳೊಂದಿಗೆ ಶಾಲಾ ಶಿಕ್ಷಕರು, ರೈಲ್ವೆ ಸಿಬ್ಬಂದಿ ವರ್ಗದವರು ರೈಲು ನಿಲ್ದಾಣ ಮತ್ತು ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿದರು.





