ಗ್ರಾಮೀಣ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಡುಗೆ ನೀಡಿ: ಹಿರೇಮಗಳೂರು ಕಣ್ಣನ್
ನಂದಿಕೆರೆಯಲ್ಲಿ ಒಗಟು-ಜಿಗಟು ಕಾರ್ಯಕ್ರಮ
ಚಿಕ್ಕಮಗಳೂರು, ಸೆ.19: ಹಳ್ಳಿಗಳು ಅಪೂರ್ವವಾದ ಕಲೆ, ಸಂಸ್ಕೃತಿ, ಸಂಪ್ರದಾಯಗಳ ಸಂಪತ್ತು ಹೊಂದಿವೆ. ಹಳ್ಳಿಯ ಈ ಸಂಪತ್ತನ್ನು ಚಿತ್ರೀಕರಿಸಿ ದಾಖಲೆಯಾಗಿ ಇಟ್ಟುಕೊಳ್ಳದಿದ್ದರೆ ಮುಂದೊಂದು ದಿನ ನೋಡಲು ಯುವ ಜನಾಂಗಕ್ಕೆ ಪಳೆಯುಳಿಕೆಗಳೂ ಸಿಗುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಯಭಾರಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.
ಸಮೀಪದ ನಂದಿಕೆರೆ ಗ್ರಾಮದಲ್ಲಿ ಜಿಲ್ಲಾ ಕಸಾಪ ಆಯೋಜಿಸಿದ್ದ ಒಗಟು-ಜಿಗಟು ಕಾರ್ಯಕ್ರಮದಲ್ಲಿ ಸಾಹಿತ್ಯ ರಸದೌತಣ ವಿಷಯ ಕುರಿತು ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಜನರು ಜ್ಞಾನ ಸಂಪತ್ತಿನ ಜೊತೆಗೆ ಅನುಭವದ ಸಂಪತ್ತನ್ನು ಹೊಂದಿದ್ದಾರೆ. ಅನುಭವದ ಮೂಲಕ ಹಳ್ಳಿಗಳಲ್ಲಿ ನಮ್ಮ ಹಿರಿಯರು ಸಂಸ್ಕೃತಿ, ಸಂಪ್ರದಾಯ, ಕಲೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವುಗಳು ಅಳಿಸದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಒಗಟು, ಗಾದೆ ಮಾತುಗಳು ನಮ್ಮ ಹಳ್ಳಿಯ ಜನರ ಅನುಭವದ ಮಾತುಗಳಾಗಿವೆ. ಹಳ್ಳಿಗಳಲ್ಲಿ ಜನರು ನೆಮ್ಮದಿ, ಶಾಂತಿ, ಸಾಮರಸ್ಯದಿಂದ ಪರಸ್ಪರ ಸಹಕಾರ, ಹೊಂದಾಣಿಕೆ ಮೂಲಕ ಬದುಕು ಸಾಗಿಸುತ್ತಿದ್ದರು. ಆದರೆ, ಇಂದು ಅಪರೂಪ ವಾಗಿರುವ ಹಳ್ಳಿಯ ಸಂಪತ್ತು ಆಧುನಿಕತೆಯ ಸೊಂಕಿನಿಂದ ಅವನತಿ ಹೊಂದುವ ಹಂತ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಚಿಕ್ಕಮಗಳೂರು ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್. ನಂಜೇಗೌಡ ಮಾತನಾಡಿ, ಆಧುನಿಕತೆಯ ಭರಾಟೆಯಿಂದಾಗಿ ನಮ್ಮ ಸಂಸ್ಕೃತಿ, ಕಲೆ ಕಣ್ಮರೆ ಯಾಗುತ್ತಿದೆ. ಹೊಲ ಗದ್ದೆಗಳಲ್ಲಿ ಜನರು ಹಾಡುತ್ತಿದ್ದ ಕೋಲಾಟದ ಪದಗಳು, ಸೋಬಾನೆ ಪದಗಳು, ಒಗಟು, ಗಾದೆ ಮಾತುಗಳು ಇಂದು ಕಣ್ಮರೆಯಾಗುತ್ತಿವೆ ಎಂದರು.
ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಒಗಟು ಜಿಗಟು ಅಪರೂಪದ ಕಾರ್ಯಕ್ರಮವಾಗಿದೆ. ಹಿಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಖುಷಿ, ಸಂಭ್ರಮ ಕಂಡು ಬರುತ್ತಿತ್ತು. ಆದರೆ, ಇಂದು ಆಧುನಿಕತೆಯಿಂದಾಗಿ ಕಡಿಮೆಯಾಗುತ್ತಿದೆ. ಭಾಷೆಗಳು ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತವೆ. ಸ್ನೇಹ ಸಂಬಂಧ ವೃದ್ಧಿಗೆ ಸಹಕಾರಿಯಾಗುತ್ತವೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಒಗಟು ಜಿಗಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರೇನಹಳ್ಳಿ, ನಂದಿಕೆರೆ, ಹಲಸುಮನೆ, ವಳಗೇರ ಹಳ್ಳಿ, ತೊಂಡವಳ್ಳಿ ತಂಡಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯ ಹಿರಿಗಯ್ಯ ಬಹುಮಾನ ವಿತರಿಸಿದರು. ತಾಪಂ ಸದಸ್ಯ ಡಿ.ಜೆ. ಸುರೇಶ್, ಮಹೇಶ್, ವಸ್ತಾರೆ ಗ್ರಾಪಂ ಅಧ್ಯಕ್ಷ ರವಿ, ಉಪಾಧ್ಯಕ್ಷೆ ಜ್ಯೋತಿ, ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ವಸ್ತಾರೆ ಹೋಬಳಿ ಕಸಾಪ ಅಧ್ಯಕ್ಷ ಟಿ.ಎ. ನಿಂಗೇಗೌಡ, ಮುಖಂಡ ದೀಪಕ್ ದೊಡ್ಡಯ್ಯ ಉಪಸ್ಥಿತರಿದ್ದರು. ಕನ್ನೇನಹಳ್ಳಿ ಬಾಲು ಮತ್ತಿತರರಿದ್ದರು.







