ಸಹಕಾರಿ ಸಂಸ್ಥೆಗಗಳಿಂದ ಸಾಮಾಜಿಕ ಜವಾಬ್ದಾರಿ: ಮಾಜಿ ಸಚಿವ ವಿನಯಕುಮಾರ್ ಸೊರಕೆ
2015-16ನೆ ಸಾಲಿನ ಸಭೆ ಸಹ್ಯಾದ್ರಿ ಅಡಿಕೆ ಬೆಳೆಗಾರರ ಸಂಸ್ಥೆಯಿಂದ ವಾರ್ಷಿಕ 284 ಕೋ. ರೂ. ವ್ಯವಹಾರ

ತೀರ್ಥಹಳ್ಳಿ, ಸೆ.19: ಸಹಕಾರಿ ಸಂಸ್ಥೆಗಳು ತಾನೂ ಬೆಳೆಯುವುದರ ಜೊತೆಗೆ ಸಮಾಜವನ್ನು ಬೆಳೆಸುತ್ತಿವೆ. ಸಹಕಾರಿ ಸಂಸ್ಥೆಗಳು ಊರಿಗೆ ಬೆಳಕು ನೀಡುವ ಕೆಲಸ ಮಾಡುತ್ತಿದ್ದು, ತೀರ್ಥಹಳ್ಳಿ ಸಹ್ಯಾದ್ರಿ ಸಮೂಹ ಸಂಸ್ಥೆ ಸಾಮಾಜಿಕ ಜವಾಬ್ದಾರಿಯುತ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ತೀರ್ಥಹಳ್ಳಿಯ ಸಹ್ಯಾದ್ರಿ ಅಡಿಕೆ ಬೆಳೆಗಾರರ ಸಂಸ್ಥೆ, ಶರಾವತಿ ಪತ್ತಿನ ಸಹಕಾರ ಸಂಘ ಹಾಗೂ ಸಮೃದ್ಧಿ ಸಂಸ್ಥೆಯವರ 2015-16ನೆ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಲೆನಾಡಿಗೆ ಸಹಕಾರಿ ಕ್ಷೇತ್ರದಲ್ಲಿ ಪ್ರಬಲ ಸಂಬಂಧವಿದೆ. ಗ್ರಾಹಕರು ಹಾಗೂ ಸಂಸ್ಥೆಗಳ ನಡುವೆ ಪ್ರೀತಿ, ವಿಶ್ವಾಸದಿಂದ ವ್ಯವಹಾರ ಸಂಬಂಧ ವೃದ್ಧಿಯಾಗಬೇಕು. ಸಹಕಾರಿ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿರುವ ಶ್ರೀ ವೀರೇಂದ್ರ ಹೆಗ್ಗಡೆಯವರ ಸಾಧನೆ ಬೇರೆ ಕ್ಷೇತ್ರದವರಿಗೂ ಮಾದರಿಯಾಗಬೇಕು. ಸಹಕಾರಿ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿದಾಗ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ ಮಾತನಾಡಿ, ಮಲೆನಾಡ ಜನರ ಬದುಕನ್ನು ಉಳಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಬಹು ಮುಖ್ಯವಾಗಿದೆ. ಅಡಿಕೆ ಬೆಳೆಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಮಲೆನಾಡಿಗರಿಗೆ ಮತ್ತೆ ಆತಂಕ ಕಾಡುವಂತಾಗಿದೆ. ಅಡಿಕೆಯಲ್ಲಿ ಹಾನಿಕಾರಕ ಅಂಶವಿದೆಯೆಂಬ ವರದಿ ಬಂದಿದ್ದು, ಅಡಿಕೆಯನ್ನು ನಿಷೇಧ ಮಾಡಬೇಕು ಎಂಬ ಚರ್ಚೆ ಒಂದೆಡೆ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರರು ಹೋರಾಟ ಮಾಡುವ ಸಂದರ್ಭ ಬರಬೇಕಾದೀತು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷ ಬಸವಾನಿ ವಿಜಯದೇವ್, 2015-16ನೆ ಸಾಲಿನಲ್ಲಿ ಸಹ್ಯಾದ್ರಿ ಸಂಸ್ಥೆ 35 ಲಕ್ಷ ನಿವ್ವಳ ಲಾಭ, ಶರಾವತಿ ಪತ್ತಿನ ಸಂಸ್ಥೆ 24 ಲಕ್ಷ ನಿವ್ವಳ ಲಾಭ ಹಾಗೂ ಸಮೃದ್ಧಿ ಸಂಸ್ಥೆ 2.16 ಲಕ್ಷ ನಿವ್ವಳ ಲಾಭ ಪಡೆದಿದೆ. ಸಹ್ಯಾದ್ರಿ ಸಂಸ್ಥೆ 284 ಕೋಟಿ ವ್ಯವಹಾರ ನಡೆಸುವುದರ ಮೂಲಕ ರಾಜ್ಯದಲ್ಲೇ ಅತ್ಯುತ್ತಮ ಸಹಕಾರಿ ಸಂಸ್ಥೆಯಾಗಿ ಮುನ್ನಡೆಯುವ ಹಾದಿಯಲ್ಲಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಕೆ.ಎ. ವೆಂಕಟೇಶ್, ಸಹ್ಯಾದ್ರಿ ಸಮೃದ್ಧಿ ಮತ್ತು ಶರಾವತಿ ಸಂಸ್ಥೆಯ ನಿದೇಶಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ನಿವೃತ್ತ ಲೆಕ್ಕ ಪರಿಶೋಧಕ ಬಿ.ಡಿ. ನರೇಂದ್ರ, ಸಹ್ಯಾದ್ರಿ ಬಸ್ ಚಾಲಕ ಅರುಣ್ ಹೊಸನಗರ, ನಿರ್ವಾಹಕ ಬಿ.ಡಿ. ಗಂಗಾಧರ್‌ರವರನ್ನು ಪುರಸ್ಕರಿಸಲಾಯಿತು.







