ಹಳೆ ಸಾಲದ ಅಸಲು ಪಾವತಿಸಿದರೆ ಸಂಪೂರ್ಣಬಡ್ಡಿಮನ್ನಾ: ಕೋಟೆ ರಂಗನಾಥ್
ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸರ್ವ ಸದಸ್ಯರ ಸಭೆ

ಚಿಕ್ಕಮಗಳೂರು, ಸೆ.19: ರೈತರು ಕಳೆದ ಎರಡು ದಶಕಗಳ ಹಿಂದಿನಿಂದಲೂ ಪಡೆದ ಹಳೆ ಸಾಲದ ಕಂತನ್ನು ಪಾವತಿಸಿದರೆ ಸಂಪೂರ್ಣ ಬಡ್ಡಿಮನ್ನಾ ಮಾಡುವ ಜೊತೆ ಹೊಸ ಸಾಲವನ್ನು ಪಡೆಯುವ ಅವಕಾಶ ಸರಕಾರ ಒದಗಿಸಲಿದೆೆ ಎಂದು ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ಕೋಟೆ ರಂಗನಾಥ್ ತಿಳಿಸಿದರು.
ಅವರು ಸೋಮವಾರ ನಗರದ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಳೆ ಸಾಲದ ಅಸಲನ್ನು ಪಾವತಿಸಿ ಬಡ್ಡಿಮನ್ನಾ ಯೋಜನೆಯನ್ನು ಸದುಪಯೋಗ ಮಾಡಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಹೊಸ ಸಾಲವನ್ನು ಪಡೆಯುವ ಮೂಲಕ ತಮ್ಮ ಆರ್ಥಿಕ ಪ್ರಗತಿ ಹೊಂದುವಂತೆ ರೈತರಿಗೆ ಕಿವಿ ಮಾತು ಹೇಳಿದರು.
ಬ್ಯಾಂಕ್‌ನಲ್ಲಿ 5,300 ಜನ ಸದಸ್ಯರಿದ್ದು ಈ ಪೈಕಿ 3,711 ಜನ ಸಕ್ರಿಯ ಸದಸ್ಯರಾಗಿದ್ದಾರೆ . 1ಕೋಟಿ 4 ಲಕ್ಷ ರೂ. ಶೇರು ಬಂಡವಾಳ ಹೊಂದಿದ್ದು 1,665 ಸದಸ್ಯರಿಗೆ 9 ಕೋಟಿ ರೂ. ಸಾಲ ವಿತರಿಸಲಾಗಿದೆ. ಇದರಲ್ಲಿ 4 ಕೋಟಿ ರೂ. ಸಾಲ ವಸೂಲಾತಿಯಾಗಿದ್ದು ಉಳಿದಂತೆ 5ಕೋಟಿ ರೂ. ಸದಸ್ಯರು ಪಾವತಿಸಬೇಕಾಗಿದೆ ಎಂದರು.
ಭೂ ಅಭಿವೃದ್ಧಿ, ಕಾಫಿ, ಅಡಿಕೆ, ತೆಂಗು, ಬಾವಿ, ಟ್ರ್ಯಾಕ್ಟರ್ ಖರೀದಿ ಸೇರಿದಂತೆ ವಿವಿಧ ರೀತಿಯ ಕೃಷಿ ಸಾಲವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್‌ನ ಉಪಾಧ್ಯಕ್ಷ ಎಸ್.ಜಿ. ಗುರೂಮೂರ್ತಿ, ನಿರ್ದೇಶಕ ಎಂ.ಎ. ನಾಗರಾಜ್, ದಾನಿಹಳ್ಳಿ ಮಂಜುನಾಥ್, ಈ.ಆರ್. ಮಹೇಶ್, ಎ.ಎನ್. ರವೀಶ್, ಕೆ.ಪಿ. ಸತೀಶ್‌ಗೌಡ, ಕೆ.ಆರ್. ಚಂದ್ರೇಗೌಡ, ಎಂ.ಸಿ. ರೇವಣ್ಣ, ಲಕ್ಷ್ಮಯ್ಯ, ಜಯಲಕ್ಷ್ಮಿ, ಮಧು ಬಿಲ್ಲೇಶ್‌ಗೌಡ, ಸಿದ್ದೇಗೌಡ, ಕೆ.ಪಿ. ಶಿವಪ್ರಕಾಶ್, ವ್ಯವಸ್ಥಾಪಕ ಎಸ್.ಎಂ.ಸೋಮಸುಂದರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







