Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕಾವೇರಿ ನೀರನ್ನು ಬಳಸಿ ರಾಜಕೀಯ ಕೃಷಿ

ಕಾವೇರಿ ನೀರನ್ನು ಬಳಸಿ ರಾಜಕೀಯ ಕೃಷಿ

ವಾರ್ತಾಭಾರತಿವಾರ್ತಾಭಾರತಿ19 Sept 2016 11:52 PM IST
share
ಕಾವೇರಿ ನೀರನ್ನು ಬಳಸಿ ರಾಜಕೀಯ ಕೃಷಿ

ಕಾವೇರಿ ವಿಷಯದಲ್ಲಿ ಮತ್ತೆ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ತಮಿಳುನಾಡಿಗೆ 10 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ಗಳಂತೆ ಕಾವೇರಿ ನದಿ ನೀರನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರಕಾರಕ್ಕೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ಆದೇಶ ನೀಡಿದ್ದಾರೆ. ಇಂತಹದೊಂದು ಆದೇಶ ತೀರಾ ಅನಿರೀಕ್ಷಿತವೇನೂ ಆಗಿರಲಿಲ್ಲ. ಶಶಿ ಶೇಖರ್ ಅವರಿಂದ ಇದಕ್ಕಿಂತ ಭಿನ್ನವಾದ ತೀರ್ಪು ಹೊರ ಬೀಳಲಾರದು ಎನ್ನುವುದನ್ನು ಈ ಮೊದಲೇ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಅದೀಗ ನಿಜವಾಗಿದೆ. ತಮಿಳುನಾಡು ಸರಕಾರ ಸುಮಾರು 8 ಸಾವಿರ ಕ್ಯೂಸೆಕ್ ನೀರಿನ ವಾದವನ್ನು ಮಂಡಿಸಿತ್ತು. ಸಾಂಬಾ ಬೆಳೆಗೆ ಹೆಚ್ಚಿನ ನೀರು ಅಗತ್ಯವಿದೆ ಎಂದು ಅದು ಹೇಳಿದೆ. ತಮಿಳುನಾಡಿನಲ್ಲಿ ನೀರಿಲ್ಲದೆ ಸಾಂಬಾ ಬೆಳೆ ಒಣಗಿ ಹೋಗಿರುವ ಕುರಿತಂತೆ ಯಾವ ವರದಿಯೂ ಈವರೆಗೆ ಮಾಧ್ಯಮಗಳಿಂದ ಹೊರ ಬಿದ್ದಿಲ್ಲ. ನೀರು ತನ್ನ ಹಕ್ಕು ಎನ್ನುವ ರೀತಿಯಲ್ಲಿ ತಮಿಳು ನಾಡು ವರ್ತಿಸುತ್ತಿದೆ. ತಮಿಳುನಾಡಿಗೆ ನೀರಿನ ಅಗತ್ಯ ಎಷ್ಟಿದೆಯೋ ಅದರ ದುಪ್ಪಟ್ಟು ಅಗತ್ಯ ಕರ್ನಾಟಕಕ್ಕಿದೆ. ಕುಡಿಯುವ ನೀರಿಗೇ ಇಲ್ಲಿ ತತ್ವಾರವಿರುವಾಗ, ನಮ್ಮ ಜನರ ಹಿತಾಸಕ್ತಿಯನ್ನು ಬದಿಗಿಟ್ಟು ತಮಿಳು ನಾಡಿಗೆ ನೀರು ಹರಿಯಬಿಡುವುದು ಎಷ್ಟು ಸರಿ? ಕರ್ನಾಟಕದ ಈ ಕೂಗು ಕೇಂದ್ರಕ್ಕೆ ತಲುಪಿಲ್ಲ. ಅಥವಾ ಕೇಂದ್ರ ಜಾಣ ಕಿವುಡು ಪ್ರದರ್ಶಿಸುತ್ತಿದೆ. ಮುಖ್ಯವಾಗಿ ಜಯಲಲಿತಾ ವರ್ಚಸ್ಸಿಗೆ ಕೇಂದ್ರ ಸರಕಾರ ಮಣಿದಿರುವುದು ಮತ್ತು ಕಾವೇರಿ ನೀರಿನ ಮೂಲಕ ಜಯಲಲಿತಾರನ್ನು ಓಲೈಸಲು ಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಜೊತೆಗೆ ಕಾವೇರಿಯನ್ನು ಮುಂದಿಟ್ಟುಕೊಂಡು ಬಿಜೆಪಿ, ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಸರಕಾರವನ್ನು ಈ ಮೂಲಕ ದುರ್ಬಲಗೊಳಿಸುವುದು ಕೇಂದ್ರದ ದುರುದ್ದೇಶವಾಗಿರಬಹುದು. ಕಾವೇರಿಯ ಹೆಸರಿನಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಸಂಭವಿಸಿದ ಬೆಂಕಿ ಅವಘಡ, ದುಷ್ಕರ್ಮಿಗಳ ಆಟಾಟೋಪ ಇವೆಲ್ಲ ಗಮನಿಸುವಾಗ, ಕಾವೇರಿಯ ನೀರು ರೈತರ ಕೃಷಿಗಷ್ಟೇ ಸಂಬಂಧಪಡದೆ, ರಾಜಕೀಯ ಕೃಷಿಗೂ ಸಂಬಂಧಪಟ್ಟಿರುವುದು ಸ್ಪಷ್ಟವಾಗುತ್ತದೆ. ಇಲ್ಲಿನ ಬಿಜೆಪಿ ನಾಯಕರಿಗೂ ತೀರ್ಪು ಕರ್ನಾಟಕದ ಪರವಾಗಿ ಬರುವುದು ಬೇಕಾಗಿಲ್ಲ. ತೀರ್ಪಿನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಬೇಕು, ಜನರು ಉದ್ವಿಗ್ನಗೊಳ್ಳಬೇಕು, ಕಾನೂನು ಅಸ್ತವ್ಯಸ್ತವಾಗಬೇಕು, ಸರಕಾರ ಕುಸಿಯಬೇಕು ಎಂದು ಪರೋಕ್ಷವಾಗಿ ಬಯಸುತ್ತಿರುವಂತಿದೆ. ಯಾಕೆಂದರೆ, ಕೇಂದ್ರಕ್ಕೆ ಒತ್ತಡ ಹೇರುವ ಯಾವ ಕೆಲಸವೂ ಬಿಜೆಪಿ ಸಂಸದರಿಂದ ಆಗಿಲ್ಲ. ಬದಲಿಗೆ ಬಿಜೆಪಿಯ ಸಂಸದರು, ಕೇಂದ್ರದ ವಕಾಲತನ್ನು ವಹಿಸುತ್ತಿದ್ದಾರೆ.

ಕೇಂದ್ರ-ರಾಜ್ಯದಲ್ಲಿ ಬೇರೆ ಬೇರೆ ಸರಕಾರಗಳಿರುವಾಗ ಇಂತಹ ಅನ್ಯಾಯಗಳು ಆಗುವುದು ಸಹಜ. ಕರ್ನಾಟಕಕ್ಕೆ ಹಲವು ಬಾರಿ ಅನುಭವಕ್ಕೆ ಬಂದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ, ಇಲ್ಲಿ ಬಿಜೆಪಿ ಅಥವಾ ಜೆಡಿಎಸ್ ಸರಕಾರ ಇದ್ದಾಗಲೂ ಇದು ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವುದು ಸಂಸದರ ಕೆಲಸ. ಕರ್ನಾಟಕದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಈ ಸಂದರ್ಭದಲ್ಲಿ ಮಹತ್ವದ ಪಾತ್ರವನ್ನು ವಹಿಸುವುದು ಅತ್ಯಗತ್ಯವಾಗಿದೆ. ಸದಾನಂದಗೌಡ, ಅನಂತಕುಮಾರ್, ಯಡಿಯೂರಪ್ಪ ಮೊದಲಾದ ನಾಯಕರಿಗೆ ಕೇಂದ್ರದ ಹೈಕಮಾಂಡ್‌ನ ಜೊತೆಗೆ ಆತ್ಮೀಯತೆಯಿದೆ. ರಾಜ್ಯದ ಜನರ ಅಗತ್ಯವನ್ನು ಅವರಿಗೆ ಮನವರಿಕೆ ಮಾಡುವುದು ಈ ಸಂಸದರ ಕರ್ತವ್ಯ. ಮೋದಿಯನ್ನು ಮಧ್ಯಪ್ರವೇಶ ಮಾಡುವಂತೆ ಒತ್ತಡ ಹೇರುವುದು ಇವರ ಹೊಣೆಗಾರಿಕೆ. ಆದರೆ ಈವರೆಗೆ ಬಿಜೆಪಿಯ ಸಂಸದರು ಸಂಪೂರ್ಣ ವೌನವಾಗಿದ್ದಾರೆ. ಕಾವೇರಿಯ ಕುರಿತಂತೆ ಯಾವ ಹೇಳಿಕೆಯೂ ಅವರಿಂದ ಹೊರ ಬಿದ್ದಿಲ್ಲ. ಬದಲಿಗೆ, ಮೋದಿ ಮಧ್ಯ ಪ್ರವೇಶಿಸುವುದಿಲ್ಲ ಎಂಬಂತಹ ಬೇಜವಾಬ್ದಾರಿ ಹೇಳಿಕೆಯನ್ನು ಅವರು ನೀಡುತ್ತಿದ್ದಾರೆ. ಇದು ಪರೋಕ್ಷವಾಗಿ ಕೇಂದ್ರಕ್ಕೆ ಹಾಸಿಗೆ ಹಾಸಿ ಕೊಟ್ಟಂತೆ. ರಾಜ್ಯದ ಸಂಸದರಿಗೇ ಮೋದಿ ಮಧ್ಯಪ್ರವೇಶಿಸುವುದು ಬೇಕಿಲ್ಲವಾದಮೇಲೆ, ಕೇಂದ್ರದ ಮುಖಂಡರು ಯಾಕಾದರೂ ರಾಜ್ಯದ ಜನರ ಮೇಲೆ ಆಸಕ್ತಿಯನ್ನು ತೋರಿಸಿಯಾರು? ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸುವುದು ಅನಿವಾರ್ಯ. ಒಂದು ವೇಳೆ, ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದೇ ಇದ್ದರೆ, ಎರಡೆರಡು ರೀತಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ. ಒಂದು, ಜನರಿಂದ ಆಯ್ಕೆಯಾಗಿರುವ ಸರಕಾರ ಉರುಳಬಹುದು. ರಾಜ್ಯಪಾಲರ ಕೈಗೆ ರಾಜ್ಯದ ಚುಕ್ಕಾಣಿ ಬರುತ್ತದೆ. ರಾಜ್ಯಪಾಲರು ಕೇಂದ್ರದ ವಕ್ತಾರರಾಗಿ ಕೆಲಸ ಮಾಡುವವರು. ಇವರಿಂದ ಕರ್ನಾಟಕಕ್ಕೆ ನ್ಯಾಯ ಸಿಗುತ್ತದೆ ಎನ್ನುವಂತಿಲ್ಲ. ಅಥವಾ ಅವರು ಸಂಪೂರ್ಣ ತಮಿಳುನಾಡು ಪರವಾಗಿಯೇ ಕೆಲಸ ಮಾಡುವ ಸಾಧ್ಯತೆಗಳಿರುತ್ತದೆ. ಆದುದರಿಂದ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸಿ, ಸರಕಾರ ಬರ್ಖಾಸ್ತು ಮಾಡುವ ಕೆಲಸದಿಂದ ಜನರಿಗೆ ಯಾವ ಲಾಭವೂ ಇಲ್ಲ. ಕಾವೇರಿ ನೀರು ನಮ್ಮದಾಗುವುದೂ ಇಲ್ಲ. ಜೊತೆ ಜೊತೆಗೆ ಸಂವಿಧಾನಕ್ಕೆ ಮಾಡುವ ಅವಮಾನವೂ ಆಗುತ್ತದೆ. ಇದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸದೇ ಇದ್ದರೆ, ಮುಂದಿನ ದಿನಗಳಲ್ಲಿ ಪೂರ್ಣ ತೀರ್ಪು ಹೊರ ಬೀಳುವಾಗ ರಾಜ್ಯಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಆದುದರಿಂದ, ಸದ್ಯಕ್ಕೆ ಸುಪ್ರೀಂಕೋರ್ಟ್‌ನ ತೀರ್ಪಿಗಾಗಿ ಕಾಯುವುದು, ಅದನ್ನು ಒಪ್ಪುವುದು ರಾಜ್ಯಕ್ಕೆ ಅನಿವಾರ್ಯ.

ಇದೇ ಸಂದರ್ಭದಲ್ಲಿ, ಮೇಲುಸ್ತುವಾರಿ ಸಮಿತಿಯ ತೀರ್ಪಿನ ವಿರುದ್ಧ ಮತ್ತೆ ದುಷ್ಕರ್ಮಿಗಳು ರಾಜ್ಯದೊಳಗೆ ಗಲಭೆ ಎಬ್ಬಿಸುವ, ನಾಶ, ನಷ್ಟಗಳನ್ನುಂಟು ಮಾಡುವ ಎಲ್ಲ ಸಾಧ್ಯತೆಗಳು ಕಾಣುತ್ತವೆ. ಕಾವೇರಿ ನೀರು ರೈತರ ಜೀವನ ಮರಣದ ಪ್ರಶ್ನೆಯಾದರೂ, ಇಂದು ರಾಜ್ಯದಲ್ಲಿ ನೀರಿನ ಹೆಸರಲ್ಲಿ ಗಲಭೆ ಎಬ್ಬಿಸುತ್ತಿರುವವರು ರೈತರಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ 50ಕ್ಕೂ ಅಧಿಕ ಬಸ್ಸಿಗೆ ಬೆಂಕಿ ಕೊಟ್ಟವರು ಯಾರೂ ರೈತರಾಗಿರಲಿಲ್ಲ. ಕನ್ನಡ ಪರ ಹೋರಾಟಗಾರರೂ ಆಗಿರಲಿಲ್ಲ. ಸಮಯದ ಲಾಭವನ್ನು ತನ್ನದಾಗಿಸಲು ಯತ್ನಿಸಿದ ದುಷ್ಕರ್ಮಿಗಳು ಇವರಾಗಿದ್ದರು. ವಿಪರ್ಯಾಸವೆಂದರೆ, ಬೆಂಕಿ ಕೊಡಲು ಒಬ್ಬ ಮಹಿಳೆಯನ್ನು ಬಳಸಿಕೊಂಡದ್ದು. ಈಕೆಗೆ ಕಾವೇರಿ ನೀರಿನ ಯಾವ ಹಿನ್ನೆಲೆಯೂ ಗೊತ್ತಿಲ್ಲ. ಕೇವಲ ಹಣದಾಸೆಗೆ ಬೆಂಕಿ ಹಚ್ಚುವ ಕೃತ್ಯಕ್ಕೆ ಇಳಿದಿದ್ದಳು. ಇದೀಗ ಈಕೆ ಜೈಲು ಪಾಲಾಗಿದ್ದಾಳೆ. ಜೈಲಿನಿಂದ ಜಾಮೀನಿನ ಮೇಲೆ ಬಿಡಿಸುವುದಕ್ಕೂ ಈಗ ಜನರಿಲ್ಲ. ಬೇಡಿಕೆಗಳಿಗಾಗಿ ಪ್ರತಿಭಟನೆ ಮಾಡುವ ರೈತರು, ಕಾರ್ಮಿಕರ ಮೇಲೆ ಯಾವ ದಾಕ್ಷಿಣ್ಯವಿಲ್ಲದೆ ಲಾಠಿ ಬೀಸುವ ಪೊಲೀಸರು, ಈ ಗಲಭೆಗೈಯುವ ದುಷ್ಕರ್ಮಿಗಳ ಕುರಿತಂತೆ ಯಾಕೆ ಮೃದುವಾಗಿದ್ದಾರೆ ಎನ್ನುವುದು ಸೋಜಿಗದ ಸಂಗತಿಯಾಗಿದೆ. ಸರಕಾರ ಕಾವೇರಿಯ ಕುರಿತಂತೆ ಸುಪ್ರೀಂಕೋರ್ಟ್‌ನಲ್ಲಿ ಬಲವಾಗಿ ವಾದ ಮಂಡಿಸುವುದರ ಜೊತೆಗೆ, ಇಂತಹ ದುಷ್ಕರ್ಮಿಗಳು ಕಾವೇರಿಯ ಹೆಸರಿನಲ್ಲಿ ನಾಡಿಗೆ ನಷ್ಟ ಉಂಟು ಮಾಡುವುದನ್ನು ಅಷ್ಟೇ ಪರಿಣಾಮಕಾರಿಯಾಗಿ ತಡೆಯಲು ಮುಂದಾಗಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X