ಭಾರತದಲ್ಲಿ ಆಶ್ರಯ ಕೋರಲಿರುವ ಬಲೂಚಿಸ್ತಾನ ಮುಖಂಡ ಬುಗ್ತಿ

ಜಿನೇವಾ, ಸೆ.19: ತಾನು ಭಾರತದಲ್ಲಿ ಆಶ್ರಯ ಕೋರಲು ನಿರ್ಧರಿಸಿರುವುದಾಗಿ ದೇಶಭ್ರಷ್ಟ ಬಲೂಚಿ ಸ್ತಾನ ಮುಖಂಡ ಬ್ರಹುಂದಗ್ ಬುಗ್ತಿ ತಿಳಿಸಿದ್ದಾರೆ.
ಪ್ರತ್ಯೇಕತಾವಾದಿ ಅಭಿಯಾನಗಳಿಂದಾಗಿ ಪಾಕಿಸ್ತಾ ನದ ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿರುವ ಬುಗ್ತಿಗೆ ಆಶ್ರಯ ನೀಡುವ ಕುರಿತು ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಇತ್ತೀಚೆಗೆ ಭಾರತ ಹೇಳಿಕೆ ನೀಡಿತ್ತು.
ಸ್ವಿಝರ್‌ಲ್ಯಾಂಡ್‌ನಲ್ಲಿ ನೆಲೆಸಿರುವ ಬುಗ್ತಿ, ತಾನು ಆಶ್ರಯ ಕೋರಿ ಜಿನೇವಾದಲ್ಲಿರುವ ಭಾರತೀಯ ದೂತಾವಾಸ ಕಚೇರಿಯಲ್ಲಿ ನಾಳೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬಲೂಚ್ ರಿಪಬ್ಲಿಕನ್ ಪಕ್ಷದ ಸ್ಥಾಪಕ ಮತ್ತು ಮುಖಂಡನಾಗಿರುವ ಬುಗ್ತಿ, ಕಳೆದ ಕೆಲ ವರ್ಷಗಳಲ್ಲಿ ಪಾಕಿಸ್ತಾನಿ ಪಡೆಗಳು ಬಲೂಚಿಸ್ತಾನದಲ್ಲಿ ಸುಮಾರು 5 ಸಾವಿರ ಮಂದಿಯನ್ನು ಹತ್ಯೆ ಮಾಡಿವೆ ಮತ್ತು ಸುಮಾರು 20 ಸಾವಿರ ಮಂದಿ ಕಣ್ಮರೆಯಾಗಲು ಕಾರಣವಾಗಿವೆ ಎಂದು ಆರೋಪಿಸಿದ್ದಾರೆ. ತನ್ನ ಅಜ್ಜ, ಬಲೂಚ್ ರಾಷ್ಟ್ರವಾದಿ ನಾಯಕ ಅಕ್ಬರ್ ಬುಗ್ತಿ ನಿಧನದ ಬಳಿಕ ಬ್ರಹುಂದಗ್ ಬುಗ್ತಿ ಅಫ್ಘಾನಿಸ್ತಾನದಲ್ಲಿ ದೇಶಭ್ರಷ್ಟರಾಗಿ ಜೀವನ ನಡೆಸುತ್ತಿದ್ದರು. ಆತನನ್ನು ವಶಕ್ಕೆ ಪಡೆದುಕೊಳ್ಳುವಂತೆ ಪಾಕ್ ಸರಕಾರ ಅಫ್ಘಾನಿಸ್ತಾನದ ಮೇಲೆ ಒತ್ತಡ ಹೇರುತ್ತಿದ್ದಂತೆಯೇ ಬುಗ್ತಿ 2010ರಲ್ಲಿ ಸ್ವಿಝರ್‌ಲ್ಯಾಂಡ್‌ಗೆ ಸ್ಥಳಾಂತರಗೊಂಡಿದ್ದರು. ಬುಗ್ತಿ ಮತ್ತು ಇತರ ಬಲೂಚಿ ನಾಯಕರು ಭೀತಿವಾದಿಗಳಾಗಿದ್ದು ಇವರಿಗೆ ಭಾರತ ನೆರವು ನೀಡುತ್ತಿದೆ ಎಂದು ಪಾಕ್ ಸರಕಾರ ಆರೋಪಿಸುತ್ತಿದೆ. ಸುಮಾರು 15 ಸಾವಿರದಷ್ಟು ಬಲೂಚಿಸ್ತಾನ್ ಪ್ರಜೆಗಳು ಅಫ್ಘಾನಿಸ್ತಾನದಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದರೆ, ಸುಮಾರು 2 ಸಾವಿರದಷ್ಟು ಮಂದಿ ಯುರೋಪ್‌ನ ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಬಲೂಚಿಸ್ತಾನದ ಪರಿಸ್ಥಿತಿಯನ್ನು ವಿಶೇಷವಾಗಿ ಪ್ರಸ್ತಾವಿಸಿರುವುದನ್ನು ಶ್ಲಾಘಿಸಿದ್ದ ಬುಗ್ತಿ, ಕಳೆದ ಏಳು ದಶಕಗಳಲ್ಲೇ ಬಲೂಚಿಸ್ತಾನ ಪರ ಇದು ಅತ್ಯಂತ ಪ್ರಬಲ ಹೇಳಿಕೆಯಾಗಿದೆ ಎಂದು ಹೇಳಿದ್ದರು.







