‘ಮಾ-ಯೇ ಸಿನಿಮಾ ಹೈ’ ಹಿಂಗ್ಲಿಷ್ ಸಿನೆಮಾ ಶೀಘ್ರ ತೆರೆಗೆ
ಮಂಗಳೂರು, ಸೆ.19: ಬಾಲಿವುಡ್‌ನ ಸಿನಿಮಾ ನಿರ್ದೇಶಕ, ಮಂಗಳೂರು ಮೂಲದ ಸಂದೀಪ್ ಮಲಾನಿ ನಿರ್ದೇಶನದಲ್ಲಿ ‘ಮಾ-ಯೇ ಸಿನಿಮಾ ಹೈ’ ಹಿಂಗ್ಲಿಷ್ (ಹಿಂದಿ-ಇಂಗ್ಲಿಷ್) ಸಿನಿಮಾ ತಯಾರಾಗುತ್ತಿದ್ದು, ಇದರಲ್ಲಿ 100 ಮಂದಿ ಕಲಾವಿದರು ಅಭಿನಯಿಸುತ್ತಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂದೀಪ್ ಮಲಾನಿ, ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ನವೆಂಬರ್‌ಗೆ ಚಿತ್ರ ತೆರೆ ಕಾಣಲಿದೆ. ಮಲ್ಟಿಪ್ಲೆಕ್ಸ್‌ಗಳಿಗೆ ಹಾಗೂ ವೆಬ್ ಸೀರೀಸ್ ಆಗಿ ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಮಂಗಳೂರು, ಬೆಂಗಳೂರು, ಮುಂಬೈಗಳಲ್ಲಿ ಪ್ರೀಮಿಯರ್ ಶೋ ನಡೆಸಲಾಗುವುದು ಎಂದರು.
ಧಾರಾವಾಹಿ ರೀತಿಯಲ್ಲಿ ನೋಡಲು ಬಯಸುವವರಿಗಾಗಿಯೇ ಯುಟ್ಯೂಬ್‌ನಲ್ಲಿ ಮಾ...ಸಿನಿಮಾವನ್ನು ಕೆಲವೊಂದು ಹೆಚ್ಚುವರಿ ದೃಶ್ಯಗಳೊಂದಿಗೆ ಪ್ರತಿ ವಾರದಂತೆ ಕೆಲವು ಕಂತುಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಇದರಿಂದ ಪ್ರಪಂಚದಾದ್ಯಂತ ಚಿತ್ರ ತೆರೆ ಕಂಡಂತಾಗಲಿದೆ ಎಂದು ಅವರು ತಿಳಿಸಿದರು. ಚಿತ್ರದಲ್ಲಿ ಉತ್ತರ-ದಕ್ಷಿಣ ಭಾರತದ ಹಿರಿ-ಕಿರಿಯ ಅನುಭವಿ ಕಲಾವಿದರಿದ್ದಾರೆ. ಮಂಗಳೂರಿನ ತುಳು ಮತ್ತು ಕೊಂಕಣಿ ಕಲಾವಿದರು ಕೆಲವು ಹಾಡಿನ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತುಳು ಕಲಾವಿದೆ ಸರೋಜಿನಿ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೀನಾ ಮಲಾನಿ, ದೀಪಾಲಿ ಕಂಬದಕೋಣೆ, ರಂಜೀತ್ ಝಾ, ಭರತ್ ಲಕ್ಷ್ಮೀಕಾಂತ್, ಸಂಜುಕ್ತಾ ಘೋಷ್, ಶುಭ ರಕ್ಷಾ ಶಿವಂ ಕಟಾರಿಯಾ, ಮಹೇಂದ್ರ ಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾರ್ತಿಕ್ ವೆಂಕಟೇಶ್ ಅವರು ಸಂಗೀತ ನೀಡಿದ್ದು, ರಂಜೀತ್ ಝಾ ನಿರ್ಮಾಪಕರಾಗಿದ್ದಾರೆ. ಮಲಾನಿ ಟಾಕೀಸ್, ಸ್ಟುಡಿಯೊ ಏಜೆನ್ಸಿ ಸಹಯೋಗದಲ್ಲಿ ಚಿತ್ರ ನಿರ್ಮಾಣಗೊಂಡಿದ್ದು, ಮಂಗಳೂರು, ಬೆಂಗಳೂರು ಮತ್ತು ಮುಂಬೈಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಅವರು ವಿವರಿಸಿದರು.





