ಕಾಂಗ್ರೆಸ್ ಆಡಳಿತಕ್ಕಿಂತಲೂ ಪರಿಸ್ಥಿತಿ ಹದಗೆಟ್ಟಿದೆ
ಉರಿ ದಾಳಿಯ ಕುರಿತು ಪ್ರಧಾನಿಗೆ ಶಿವಸೇನೆ ತಿವಿತ
ಮುಂಬೈ, ಸೆ.19: ಉರಿ ಭಯೋತ್ಪಾದಕ ದಾಳಿಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಚುಚ್ಚಿರುವ ಶಿವಸೇನೆ, ಪರಿಸ್ಥಿತಿಯು ಹಿಂದಿನ ಕಾಂಗ್ರೆಸ್ ಆಡಳಿತಕ್ಕಿಂತಲೂ ಕಡೆಯಾಗಿದೆ. ಪಾಕಿ ಸ್ತಾನದ ಮೇಲೆ ದಾಳಿ ನಡೆಸಲು ಹಾಗೂ ಭಯೋತ್ಪಾದಕರನ್ನು ನಿರ್ಮೂಲ ಗೊಳಿಸಲು ಪ್ರಧಾನಿ ವಿಫಲರಾದರೆ, ಜಾಗತಿಕ ವರ್ಚಸ್ಸನ್ನು ಬೆಳೆಸುವ ಅವರ ಕೆಲಸ ವ್ಯರ್ಥವಾಗಲಿದೆಯೆಂದು ಇಂದು ಹೇಳಿದೆ.
ಭಯೋತ್ಪಾದಕರು ಹಾಗೂ ಪಾಕಿಸ್ತಾನ ಪರ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಮ್ಮು-ಕಾಶ್ಮೀರ ಸರಕಾರವನ್ನು ವಿಸರ್ಜಿಸಿ, ಸೇನಾಡಳಿತವನ್ನು ಜಾರಿ ಗೊಳಿಸಬೇಕೆಂದು ಅದು ಕರೆ ನೀಡಿದೆ.
ಉರಿ ದಾಳಿಯ ಮೂಲಕ ಪಾಕಿಸ್ತಾನವು ಭಾರತದ ವಿರುದ್ಧ ಬಹಿರಂಗ ಯುದ್ಧವನ್ನು ಸಾರಿದೆ. ಅದರ ಒಳಗೊಂಡಿರುವಿಕೆಯ ಕುರಿತು ಪುರಾವೆ ಸಂಗ್ರಹಿಸುವ ನಮ್ಮ ಪ್ರಯತ್ನ ಅಂತಾರಾಷ್ಟ್ರೀಯವಾಗಿ ಯಾವುದೇ ಫಲವನ್ನು ನೀಡದೆಂದು ಶಿವಸೇನೆ ಖಡಾಖಂಡಿತವಾಗಿ ಹೇಳಿದೆ.
ಇಂದು ಕಾಂಗ್ರೆಸ್ ಆಡಳಿತದ ವೇಳೆಗಿಂತಲೂ ಪರಿಸ್ಥಿತಿ ಹದಗೆಟ್ಟಿದೆ ಯೆಂಬುದನ್ನು ಯಾರಾದರೂ ಒಪ್ಪಿ ಕೊಳ್ಳಲೇಬೇಕು. ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತ, ಆ ದೇಶದ ಧ್ವಜವನ್ನು ಹಾರಿಸುತ್ತಿರುವ ವೇಳೆ ಕೇಂದ್ರ ಸರಕಾರವು ರಾಜ್ಯ ಸರಕಾರವನ್ನು ಬರ್ಖಾಸ್ತುಗೊಳಿಸಿ ಸೇನಾಡಳಿತವನ್ನು ಹೇರಬೇಕು. ರಾಷ್ಟ್ರಪತಿ(ರಾಜ್ಯಪಾಲ) ಆಡಳಿತ ಸಾಕಾಗದು ಎಂದು ಶಿವ ಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯವೊಂದು ಅಭಿಪ್ರಾಯಿಸಿವೆ.





