ಅಝರ್‌ನ ಬಿಡುಗಡೆಯೇ ಉರಿ ದಾಳಿಗೆ ಕಾರಣ: ದಿಗ್ವಿಜಯ್ ಸಿಂಗ್
ಹೊಸದಿಲ್ಲಿ, ಸೆ.19: ಉರಿ ಭಯೋತ್ಪಾದಕ ದಾಳಿಗೆ ಮಸೂದ್ ಅಝರ್ ನೇತೃತ್ವದ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆ ಕಾರಣವೆಂಬ ಶಂಕೆಯ ನಡುವೆಯೇ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಅದರ ಹೊಣೆಯನ್ನು ಎನ್‌ಡಿಎ ಸರಕಾರದ ಮೇಲೆ ಹೊರಿಸಲು ಇಂದು ಯತ್ನಿಸಿದ್ದಾರೆ. ಹಿಂದಿನ ಎನ್‌ಡಿಎ ಸರಕಾರವು 1999ರ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣದ ಸಂದರ್ಭದಲ್ಲಿ ಭಯೋತ್ಪಾದಕನನ್ನು ಬಿಡುಗಡೆ ಮಾಡುವ ಮೂಲಕ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡುದೇ ಇದಕ್ಕೆ ಕಾರಣವೆಂದು ಅವರು ಆರೋಪಿಸಿದ್ದಾರೆ.
ಉರಿ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಪ್ರಬಲ ಅಂತಾರಾಷ್ಟ್ರೀಯ ಒತ್ತಡ ತರಬೇಕೆಂದು ಸರಣಿ ಟ್ವೀಟ್‌ಗಳಲ್ಲಿ ಬಲವಾಗಿ ಪ್ರತಿಪಾದಿಸಿರುವ ದಿಗ್ವಿಜಯ್, ನಿಯಂತ್ರಣ ರೇಖೆಯ ಬಳಿಯ ತನ್ನ ನೆಲೆಯನ್ನು ರಕ್ಷಿಸಿಕೊಳ್ಳಲು ಸೇನೆ ವಿಫಲವಾದ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಇಂಡಿಯನ್ ಏರ್‌ಲೈನ್ ಅಪಹರಣದ ಬಳಿಕ ಮಸೂದ್ ಅಝರ್‌ನ ಬಿಡುಗಡೆಗೆ ನಾವು ರಾಜಿ ಮಾಡಿಕೊಂಡೆವು. ಇದರಿಂದ ದೊರೆತ ಪಾಠ? ರಾಷ್ಟ್ರೀಯ ಭದ್ರತೆಯೊಂದಿಗೆ ಎಂದೂ ರಾಜಿಮಾಡಿಕೊಳ್ಳಬಾರದು ಎಂದವರು ಹೇಳಿದ್ದಾರೆ.
ಮಸೂದ್ ಅಝರ್‌ನ ಜೈಶೆ-ಮುಹಮ್ಮದ್ ಈ ದಾಳಿಯ ಹಿಂದಿದೆ. ಬಹುಶಃ ಪಾಕಿಸ್ತಾನ ಸರಕಾರದ ಸಂಪೂರ್ಣ ಬೆಂಬಲ ಅದಕ್ಕಿತ್ತೆಂದು ದಿಗ್ವಿಜಯ್ ಆರೋಪಿಸಿದ್ದಾರೆ.





