ಅಖಿಲೇಶ್‌ರ 6 ಬೆಂಬಲಿಗರನ್ನು ಪಕ್ಷದಿಂದ ಹೊರದೂಡಿದ ಚಿಕ್ಕಪ್ಪ ಶಿವಪಾಲ್ ಯಾದವ್

ಲಕ್ನೊ, ಸೆಪ್ಟಂಬರ್ 20: ಉತ್ತರಪ್ರದೇಶದಲ್ಲಿ ಯಾದವ್ ಕುಟುಂಬ ಕಲಹ ಶಮನವಾಗಿಲ್ಲ. ಸಮಾಜವಾದಿ ಪಾರ್ಟಿ ರಾಜ್ಯಘಟಕ ಅಧ್ಯಕ್ಷ ಶಿವಪಾಲ್ ಯಾದವ್ ಆರು ಮಂದಿ ಯುವ ನಾಯಕರನ್ನು ಪಕ್ಷದಿಂದ ಹೊರಗೆ ಹಾಕಿದ್ದಾರೆಂದು ವರದಿಯಾಗಿದೆ. ಮೂವರು ಶಾಸಕರ ಸಹಿತ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರ ನಿಕಟವರ್ತಿಗಳೆನ್ನಲಾದ ಆರು ಮಂದಿಯನ್ನು ಪಕ್ಷದಿಂದ ತೆಗೆದು ಹಾಕಲಾಗಿದೆ. ಪಕ್ಷದ ಉನ್ನತ ನಾಯಕ ಮುಲಾಯಂ ಸಿಂಗ್‌ರನ್ನು ಆಕ್ಷೇಪಿಸಿವ ರೀತಿಯಲ್ಲಿ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ಶಿವಪಾಲ್ ಈ ಕ್ರಮಕೈಗೊಂಡಿದ್ದಾರೆ. ಕಳೆದ ದಿವಸ ಪಾರ್ಟಿವಿರುದ್ಧ ಚಟುವಟಿಕೆಗಳು ಮತ್ತು ಶಿಸ್ತು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಸಮಾಜವಾದಿ ಪಾರ್ಟಿರಾಷ್ಟ್ರೀಯ ಕಾರ್ಯದರ್ಶಿ ರಾಮ್‌ಗೋಪಾಲ್ ಯಾದವ್‌ರ ಅಳಿಯ ಮತ್ತು ವಿಧಾನಸಭಾ ಸದಸ್ಯರಾದ ಅರವಿಂದ್ ಪ್ರತಾಪ್‌ರನ್ನು ಶಿವಪಾಲ್ ಪಕ್ಷದಿಂದ ಹೊರಹಾಕಿದ್ದರು.
ಅಖಿಲೇಶ್ ಮತ್ತು ಶಿವಪಾಲ್ ನಡುವೆ ಇರುವ ಘರ್ಷಣೆ ಮುಲಾಯಂ ಮಧ್ಯಪ್ರವೇಶಿಸಿ ರಾಜಿಮಾಡಿಸಿದ್ದರು. ಇದರ ಬೆನ್ನಿಗೆ ಶಿವಪಾಲ್ ಯಾದವ್ ಈ ಕ್ರಮಕೈಗೊಂಡಿದ್ದಾರೆ. ಈ ಹಿಂದೆ ಅಖಿಲೇಶ್ ಯಾದವ್ ಅಧಿಕಾರಿಗಳನ್ನು ವರ್ಗಾಯಿಸಿದ್ದರು ಮತ್ತು ಶಿವಪಾಲ್ ಅವರ ಸಚಿವ ಸಂಪುಟದಲ್ಲಿ ಹೊಂದಿದ್ದ ಕೆಲವು ಪ್ರಮುಖ ಖಾತೆಗಳನ್ನು ಕಿತ್ತುಕೊಂಡಿದ್ದರು. ಇದನ್ನು ಪ್ರತಿಭಟಿಸಿ ಸಚಿವಸ್ಥಾನ ಮತ್ತು ರಾಜ್ಯಘಟಕ ಅಧ್ಯಕ್ಷ ಸ್ಥಾನಕ್ಕೆ ಶಿವಪಾಲ್ ರಾಜಿನಾಮೆ ಘೋಷಿಸಿದ್ದರು. ಮುಲಾಯಂರ ಮಧ್ಯಪ್ರವೇಶದ ನಂತರ ತನ್ನರಾಜಿನಾಮೆಯನ್ನು ವಾಪಾಸು ಪಡೆದುಕೊಂಡಿದ್ದರು ಎಂದು ವರದಿ ತಿಳಿಸಿದೆ.







