ಶಾಲಾ ಬ್ಯಾಗ್, ಹೋಮ್ ವರ್ಕ್ ಬೇಡ : ಒಮನ್ ಭಾರತೀಯ ಶಾಲೆಗಳಿಗೆ ಸಿಬಿಎಸ್ಇ

ಮಸ್ಕತ್, ಸೆ.20: ಒಂದನೆ ಹಾಗೂ ಎರಡನೆ ತರಗತಿಗಳಲ್ಲಿ ಕಲಿಯುವ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ಹೋಮ್ ವರ್ಕ್ ಬೇಡವೆಂದು ಭಾರತದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಒಮನ್ ನಲ್ಲಿರುವ ಎಲ್ಲಾ ಭಾರತೀಯ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದೆ.
ಈ ನಿರ್ದೇಶನವನ್ನು ಒಮನ್ ನಲ್ಲಿರುವ ಭಾರತೀಯ ಶಾಲೆಗಳು ಹಂತಹಂತವಾಗಿ ಜಾರಿಗೆ ತರುವುದೆಂದು ಬೋರ್ಡ್ ಆಫ್ ಡೈರಕ್ಟರ್ಸ್ ಆಫ್ ಇಂಡಿಯನ್ ಸ್ಕೂಲ್ಸ್ ಅಧ್ಯಕ್ಷ ವಿಲ್ಸನ್ ವಿ. ಜಾರ್ಜ್ ಹೇಳಿದ್ದಾರೆ.
ಸಿಬಿಎಸ್ಇ ಸುತ್ತೋಲೆಯಲ್ಲಿ ಹಲವಾರು ಶಿಫಾರಸುಗಳಿವೆ ಹಾಗೂ ಇವುಗಳನ್ನು ಪ್ರತಿಯೊಂದು ಶಾಲೆಯಲ್ಲಿ ಚರ್ಚಿಸಿ ಅವುಗಳನ್ನು ಜಾರಿಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಒಮನ್ ನಲ್ಲಿ 19 ಭಾರತೀಯ ಶಾಲೆಗಳಿದ್ದು ಅಲ್ಲಿ ಒಂದನೆ ಹಾಗೂ ಎರಡನೆ ತರಗತಿಗಳಲ್ಲಿ ಸುಮಾರು 9,000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸೆಕೆಂಡರಿ ತರಗತಿಗಳ ವಿದ್ಯಾಥಿಗಳ ಶಾಲಾ ಬ್ಯಾಗುಗಳ ಭಾರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನೂ ಕೈಗೊಳ್ಳುವಂತೆ ಮಂಡಳಿ ಆಗ್ರಹಿಸಿದೆಯಲ್ಲದೆ, ಒಂದನೆ ತರಗತಿಯಿಂದ ಎಂಟನೆ ತರಗತಿಯವರೆಗಿನ ಶಾಲಾ ಪಠ್ಯಪುಸ್ತಕಗಳು ಕಡಿಮೆ ಭಾರದ್ದಾಗಿರಬೇಕು ಎಂದು ಸಲಹೆ ನೀಡಿದೆ.
ಶಾಲೆಗೆ ಪಠ್ಯ ಪುಸ್ತಕ ಯಾ ವರ್ಕ್ ಪುಸ್ತಕಗಳನ್ನು ತರದ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡದಂತೆ ಶಿಕ್ಷಕರಿಗೆ ಶಾಲಾ ಪ್ರಿನ್ಸಿಪಾಲರು ಸಲಹೆ ನೀಡಬೇಕೆಂದೂ ಸಿಬಿಎಸ್ಇ ಸುತ್ತೋಲೆ ತಿಳಿಸಿದೆ.
ಆದರೆ ಸಿಬಿಎಸ್ಇ ಮಾಡಿರುವ ಶಿಫಾರಸುಗಳನ್ನು ಒಮನ್ ಭಾರತೀಯ ಶಾಲೆಗಳು ಜಾರಿಗೊಳಿಸುವ ಬಗ್ಗೆ ವಿದ್ಯಾರ್ಥಿಗಳ ಹೆತ್ತವರು ಸಂಶಯ ವ್ಯಕ್ತಪಡಿಸಿದ್ದಾರೆ. ಕೆಲ ಶಾಲೆಗಳು ವಿದ್ಯಾರ್ಥಿಗಳು ಭಾರವಾದ ಬ್ಯಾಗುಗಳನ್ನು ಹೊತ್ತುಕೊಂಡು ಬರದಂತೆ ಕ್ರಮ ಕೈಗೊಳ್ಳುತ್ತಿದ್ದರೂ ಕೆಲ ಶಾಲೆಗಳು ಇಂತಹ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ, ಎಂದು ಕೆಲ ಹೆತ್ತವರು ಹೇಳುತ್ತಿದ್ದಾರೆ.
ಭಾರವಾದ ಬ್ಯಾಗುಗಳನ್ನು ದೀರ್ಘಕಾಲದ ತನಕ ಹೊರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಸರಿ ಪಡಿಸಲಾಗದ ಗಂಭೀರ ಪರಿಣಾಮ ಬೀರುವುದೆಂಬುದನ್ನೂ ಸುತ್ತೋಲೆಯಲ್ಲಿ ಹೇಳಲಾಗಿದೆ.







