ಶ್ರೀಲಂಕಾ ಕ್ರಿಕೆಟಿಗ ಕುಲಶೇಖರ ಅರೆಸ್ಟ್

ಕೊಲಂಬೋ, ಸೆ.20: ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಶ್ರೀಲಂಕಾದ ಕ್ರಿಕೆಟಿಗ ನುವಾನ್ ಕುಲಶೇಖರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಕುಲಶೇಖರ ತಕ್ಷಣ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಸೋಮವಾರ ಕುಲಶೇಖರ ಚಲಾಯಿಸುತ್ತಿದ್ದ ಕಾರು ಹಾಗೂ ಮೋಟಾರ್ ಸೈಕಲ್‌ನ ನಡುವೆ ಢಿಕ್ಕಿ ಸಂಭವಿಸಿದೆ. ಆದರೆ, ಸಾವು-ನೋವು ಸಂಭವಿಸಿಲ್ಲ.
ಎ-1 ಹೈವೇಯಲ್ಲಿ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸಿದ್ದ ಮೋಟಾರ್ ಸೈಕಲ್ ತಡೆಗೋಡೆಗೆ ಅಪ್ಪಳಿಸಿದ್ದಲ್ಲದೆ ಕ್ರಿಕೆಟಿಗ ಕುಲಶೇಖರ ಚಲಾಯಿಸುತ್ತಿದ್ದ ಕಾರಿಗೆ ಢಿಕ್ಕಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತನಿಖೆಯ ಭಾಗವಾಗಿ ಕುಲಶೇಖರರನ್ನು ಬಂಧಿಸಿ, ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ. ಘಟನೆಯಿಂದ ಮೋಟಾರ್ ಸೈಕಲ್ ಸವಾರನಿಗೆ ಗಾಯವಾಗಿದೆ. ಇನ್ನುಳಿದಂತೆ ಯಾವುದೇ ಅನಾಹುತ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
34ರ ಪ್ರಾಯದ ವೇಗದ ಬೌಲರ್ ಕುಲಶೇಖರ ಮಾರ್ಚ್‌ನಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ ಟ್ವೆಂಟಿ-20 ವಿಶ್ವಕಪ್ ಪಂದ್ಯವನ್ನು ಆಡಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಲು ತಯಾರಿ ನಡೆಸುತ್ತಿದ್ದಾರೆ. ಕುಲಶೇಖರ ಜೂನ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.







