ಸೌದಿ ಏರ್ ಲೈನ್ಸ್ ವಿಮಾನ ಅಪಹರಣದ ಭೀತಿ ಸೃಷ್ಟಿಸಿದ ಪೈಲಟ್

ಮನಿಲಾ,ಸೆ.20: ಸೌದಿ ಅರೇಬಿಯನ್ ಏರ್ ಲೈನ್ಸ್ನ ಜೆಟ್ ವಿಮಾನವೊಂದರ ಪೈಲಟ್ ಅರಿವಿಲ್ಲದೆಯೇ ಎರಡು ಬಾರಿ ವಿಮಾನ ತೊಂದರೆಯಲ್ಲಿ ಸಿಲುಕಿದೆಯೆಂಬ ಸಂದೇಶವನ್ನು ಕಳುಹಿಸಿದ ಪರಿಣಾಮ ವಿಮಾನ ಅಪಹರಣಗೊಂಡಿದೆಯೆಂಬ ಸುದ್ದಿ ಸಾಕಷ್ಟು ಜನರನ್ನು ಭಯಭೀತರನ್ನಾಗಿಸಿತು. ಈ ಬೋಯಿಂಗ್ 777 ವಿಮಾನ ಮನಿಲಾದ ನಿನೋಯ್ ಅಕ್ವಿನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಇಳಿಯುತ್ತಿದ್ದಂತೆಯೇ ವಿಮಾನ ‘ಅಪಾಯದಲ್ಲಿದೆ’ ಎಂಬ ಸಂದೇಶವನ್ನು ಪೈಲಟ್ ನೀಡಿದ್ದರು.
ವಿಮಾನ ಭೂಸ್ಪರ್ಶ ಮಾಡುವ ಸ್ವಲ್ಪ ಹೊತ್ತಿನ ಮೊದಲು ಪೈಲಟ್ ಎರಡು ಬಾರಿ ತಪ್ಪಿನಿಂದ ಅಲಾರ್ಮ್ ಗುಂಡಿಯನ್ನೊತ್ತಿದ್ದರೆಂದು ನಂತರ ತಿಳಿದು ಬಂದಿತ್ತು. ಸೌದಿ ಅರೇಬಿಯಾದ ಜಿದ್ದಾದಿಂದ ಹೊರಟಿದ್ದ ಈ ವಿಮಾನದಲ್ಲಿ ಸುಮಾರು 300 ಪ್ರಯಾಣಿಕರಿದ್ದರು.
ವಿಮಾನ ನಿಲ್ದಾಣದಲ್ಲಿ ತುರ್ತು ಸೇವಾ ವಾಹನಗಳು ಸನ್ನಧ್ಧವಾಗಿದ್ದುವಲ್ಲದೆ ಪ್ರಯಾಣಿಕರೂ ವಿಮಾನದಿಂದ ಆತಂಕದಿಂದ ಕೆಳಗಿಳಿಯುತ್ತಿರುವ ಚಿತ್ರಣ ಕಂಡು ಬಂದಿತ್ತು. ಪೈಲಟ್ ತಪ್ಪಾಗಿ ಅಲಾರ್ಮ್ ಗುಂಡಿ ಒತ್ತಿದ್ದರೆಂದು ನಂತರ ತಿಳಿದು ಬಂದಾಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.





