ಮತ್ತೆ ಆರು ಸಾವಿರ ಕ್ಯೂಸಕ್ ನೀರು ಬಿಡಲು ಕರ್ನಾಟಕಕ್ಕೆ ಸುಪ್ರೀಂ ಸೂಚನೆ
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರಕ್ಕೆ ಆದೇಶ

ಹೊಸದಿಲ್ಲಿ, ಸೆ.20: ಸೆಪ್ಟಂಬರ್ 21 ರಿಂದ 27ರ ತನಕ ಮತ್ತೆ 6 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ತೀರ್ಪು ಕರ್ನಾಟಕಕ್ಕೆ ಮತ್ತೊಮ್ಮೆ ಆಘಾತ ತಂದಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ನ್ಯಾ. ದೀಪಕ್ ಮಿಶ್ರಾ ಹಾಗೂ ನ್ಯಾ. ಉದಯ್ ಲಲಿತ್ ಅವರಿದ್ದ ಸುಪ್ರೀಂಕೋರ್ಟ್‌ನ ವಿಭಾಗೀಯ ದ್ವಿಸದಸ್ಯ ಪೀಠ ಈ ಆದೇಶ ನೀಡಿತು. ಸೆ.27ಕ್ಕೆ ವಿಚಾರಣೆಯನ್ನು ಮುಂದೂಡಿತು.
ಇನ್ನು ನಾಲ್ಕು ವಾರಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು. 4 ವಾರಗಳ ಬಳಿಕ ಮಂಡಳಿಯ ರಚನೆಯ ಬಗ್ಗೆ ಮಾಹಿತಿ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಮೊದಲು ವಾದ ಮಂಡಿಸಿದ ಕರ್ನಾಟಕದ ಪರ ವಕೀಲರಾದ ಫಾಲಿ ನಾರಿಮನ್,‘‘ನೀರಿನ ಕೊರತೆಯಿಂದ ಕರ್ನಾಟಕದ ಜನತೆ ಪರಿತಪಿಸುತ್ತಿದ್ದಾರೆ. ಕಾವೇರಿ ನ್ಯಾಯಾಧೀಕರಣ ಆದೇಶ ಪಾಲಿಸಲು ಸಾಧ್ಯವಿಲ್ಲ. ತಮಿಳುನಾಡಿಗೆ ಇನ್ನು ಮುಂದೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿ ರಾಜ್ಯದ ಸಮಸ್ಯೆಯನ್ನು ಬಿಚ್ಚಿಟ್ಟರು.
ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಕರ್ನಾಟಕದ ಪರ ಇನ್ನೋರ್ವ ಹಿರಿಯ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಕರ್ನಾಟಕದ ಪರ ಇಬ್ಬರು ವಕೀಲರ ವಾದ ಮಂಡನೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತು.







