ಸೆ. 22ರಂದು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ 20ನೆ ವಾರ್ಷಿಕೋತ್ಸವದ ಉದ್ಘಾಟನೆ

ಮಂಗಳೂರು, ಸೆ.20: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ 20ನೆ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭ ಸೆ. 22ರಂದು ಮಧ್ಯಾಹ್ನ 2 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ. ಮಮ್ತಾಝ್ ಅಲಿ ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ 20 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಈ ವೇಳೆ ಉಚಿತವಾಗಿ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದಿರುವ 5 ಮಂದಿ ವ್ಯಾಪಾರಾಸಕ್ತರಿಗೆ ತಳ್ಳುವ ಗಾಡಿಗಳನ್ನು ಉಚಿತವಾಗಿ ನೀಡಲಾಗುವುದು. ಅಲ್ಲದೇ ಒಂದೇ ಮಸೀದಿಯಲ್ಲಿ ಕನಿಷ್ಠ 20 ವರ್ಷ ನಿರಂತರ ಸೇವೆ ಸಲ್ಲಿಸುತ್ತಿರುವ 20 ಮಂದಿ ಉಲಮಾಗಳಿಗೆ ಸಮ್ಮಾನ ನಡೆಯಲಿದೆ. ಕನಿಷ್ಠ 20 ವರ್ಷಗಳಿಂದ ಕಾರ್ಯಾಚರಿಸುತ್ತಿರುವ 20 ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಈ ವೇಳೆ ನಡೆಯಲಿದೆ. ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರಾದ ಮಾಜಿ ಸಚಿವ ಬಿ. ಎ. ಮೊಹಿದಿನ್ ಅವರಿಗೆ ‘ಡಿಕೆಎಸ್‌ಸಿ ಜೀವಮಾನ ಸಾಧನಾ ಪ್ರಶಸ್ತಿ’, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದಕ್ಕಾಗಿ ಶ್ರಮಿಸುತ್ತಿರುವ ತಲಾ ಓರ್ವ ಹಿಂದು, ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀಯರಿಗೆ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
20ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ಡಿ. 2ರಿಂದ 4ರ ತನಕ ಡಿಕೆಎಸ್‌ಸಿ ಅಧೀನದಲ್ಲಿರುವ ಉಡುಪಿ ಜಿಲ್ಲೆಯ ಮೂಳೂರು ಅಲ್ ಇಹ್ಸಾನ್ ಕ್ಯಾಂಪಸ್‌ನಲ್ಲಿ ನಡೆಯಲಿದೆ. 4ರಂದು 20 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸ್ವಾಗತ ಸಮಿತಿ ಖಜಾಂಚಿ ಎಚ್. ಬಿ. ಮುಹಮ್ಮದ್ ಕಣ್ಣಂಗಾರ್, ಡಿಕೆಎಸ್‌ಸಿ ಕೇಂದ್ರ ಸಮಿತಿ ಸಂಚಾಲಕರಾದ ಹಾತಿಂ ಕಂಚಿ, ಕೆ. ಎಚ್. ರಫೀಕ್ ಸೂರಿಂಜೆ, ಸ್ವಾಗತ ಸಮಿತಿ ಸಂಚಾಲಕ ಇಸಾಕ್ ಬೊಳ್ಳಾಯಿ ಉಪಸ್ಥಿತರಿದ್ದರು.







