ಮಂಗಳೂರಿಗೆ ‘ಸ್ಮಾರ್ಟ್ ಸಿಟಿ’ಯ ಗರಿ: ಮೇಯರ್

ಮಂಗಳೂರು, ಸೆ.20: ನಗರವು ಈಗಾಗಲೇ ಹಲವು ಸ್ಥರಗಳಲ್ಲಿ ಅಭಿವೃದ್ಧಿಯನ್ನು ಹೊಂದಿರುವ ನಗರವಾಗಿದ್ದು, ಇದೀಗ ಸ್ಮಾಟ್ ಸಿಟಿಗೆ ಆಯ್ಕೆಯಾಗುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಮತ್ತೊಂದು ಗರಿಯನ್ನು ಪಡೆದುಕೊಂಡಂತಾಗಿದೆ ಎಂದು ಮೇಯರ್ ಹರಿನಾಥ್ ಅಭಿಪ್ರಾಯಿಸಿದ್ದಾರೆ.
ಕೇಂದ್ರ ಸರಕಾರದಿಂದ ಮಂಗಳೂರು ನಗರವು ಸ್ಮಾಟ್ ಸಿಟಿಗೆ ಆಯ್ಕೆಯಾದ ಕುರಿತಂತೆ ತುರ್ತು ಸುದ್ದಿಗೋಷ್ಠಿಯಲ್ಲಿಂದು ಅವರು ಈ ಸಂತಸ ವ್ಯಕ್ತಪಡಿಸಿದರು.
5 ಲಕ್ಷೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಮಂಗಳೂರು ನಗರವು ಸ್ಮಾಟ್ ಸಿಟಿ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ಒಟ್ಟು 2,000.72 ಕೋಟಿ ರೂ. ಯೋಜನಾ ವೆಚ್ಚದೊಂದಿಗೆ ಮತ್ತಷ್ಟು ಸ್ಮಾರ್ಟ್ ನಗರವಾಗಿ ಹೊರಹೊಮ್ಮಲಿದೆ ಎಂದವರು ಹೇಳಿದರು.
ಪ್ರತೀ ಮನೆ ಮನೆಯಲ್ಲೂ ಆರೋಗ್ಯ, ಎಲ್ಲಾ ಮನೆಗಳಿಗೂ ಶೌಚಾಲಯ, ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಗೆ ಕ್ರಮ ಸೇರಿದಂತೆ ಹಲವು ಕ್ರಮಗಳನ್ನು ಪಾಲಿಕೆ ವತಿಯಿಂದ ಈಗಾಗಲೇ ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಇದೀಗ ಸ್ಮಾರ್ಟ್‌ಸಿಟಿ ಘೋಷಣೆಯಾಗಿದೆ ಎಂದವರು ಹೇಳಿದರು.
ಯೋಜನೆಯ ಪ್ರಮುಖ ಅಂಶಗಳು
ಸ್ಮಾಟ್ ಸಿಟಿ ಮಂಗಳೂರು ಯೋಜನೆಯ ಪ್ರದೇಶ ಆಧಾರಿತ ಪ್ರಸ್ತಾವನೆಯಡಿ ಹಂಪನಕಟ್ಟ, ಬಂದರು, ಕಾರ್‌ಸ್ಟ್ರೀರ್ ಸುತ್ತಮುತ್ತಲಿನ ಕೇಂದ್ರ ವ್ಯವಹಾರ ಕೇಂದ್ರಗಳ ಒಟ್ಟು 1,628 ಎಕರೆ ಪ್ರದೇಶದ ಅಭಿವೃದ್ಧಿ ಸೇರಿದೆ. ನಗರದ ಪ್ರಮುಖ ಕೇಂದ್ರದ 100 ಎಕರೆ ಭೂಮಿ, ಹಂಪನಕಟ್ಟೆಯ ವ್ಯವಹಾರ ಕೇಂದ್ರದ 27 ಎಕರೆ ಭೂಮಿ, ಮೀನುಗಾರಿಕಾ ಬಂದರಿನ 22 ಎಕರೆ ಪ್ರದೇಶದ ಮರು ಅಭಿವೃದ್ಧಿ, ಹಳೆ ಬಂದರಿನ 10 ಎಕರೆ ಪ್ರದೇಶದ ಮರು ಅಭಿವೃದ್ಧಿ, ಮೇಲ್ದರ್ಜೆಗೇರಿಸಲ್ಪಟ್ಟ ದೇವಸ್ಥಾನಗಳು, ಧಾರ್ಮಿಕ ಸ್ಥಳಗಳನ್ನು ಒಳಗೊಂಡ 57 ಎಕರೆ ಪ್ರದೇಶ, ಜಲಾಭಿಮುಖ ಮತ್ತು ಸಮುದ್ರ ಸುತ್ತಲಿನ 25 ಎಕರೆ ಪ್ರದೇಶಗಳ ಅಭಿವೃದ್ಧಿಯೂ ಸ್ಮಾರ್ಟ್ ಸಿಟಿ ಯೋಜನೆಯ ಪ್ರಸ್ತಾವನೆಯಲ್ಲಿ ಸೇರಿದೆ. ಇದೇ ವೇಳೆ ಐಟಿ ಸೇವೆಗಳು, ಕಚೇರಿಗಳು, ಸಣ್ಣ ಗಾತ್ರದ ಉದ್ದಿಮೆಗಳು, 42 ಎಕರೆ ಪ್ರದೇಶದಲ್ಲಿ ಅತಿಥಿಸತ್ಕಾರ ಮತ್ತು ವಿರಾಮ ಕೇಂದ್ರಗಳನ್ನು ಒಳಗೊಂಡಂತೆ ಹಂಚಿನ ಕಾರ್ಖಾನೆಗಳ ಮರುಬಳಕೆಯೊಂದಿಗೆ ಸೀಮಿತ ಸಾಮರ್ಥ್ಯದ ಕಾರ್ಖಾನೆಗಳನ್ನು ಕಾರ್ಯಾಚರಣೆಗೊಳಪಡಿಸುವುದು, 17 ಎಕರೆ ಪ್ರದೇಶಗಳಲ್ಲಿ ಜಿಲ್ಲಾ ಆಸ್ಪತ್ರೆಗಳನ್ನು (ವೆನ್‌ಲಾಕ್ ಮತ್ತು ಲೇಡಿಗೋಶನ್) ಮೇಲ್ದರ್ಜೆಗೇರಿಸುವುದು, ವಾಣಿಜ್ಯ ಮತ್ತು ಸರಕು ವಲಯಗಳಿಗೆ ಸಂಬಂಧಿಸಿ 47 ಎಕರೆ ಪ್ರದೇಶಗಳ ಜಲಾಭಿಮುಖವಾಗಿರುವ ಸಾರ್ವಜನಿಕ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು, 20 ಎಕರೆ ಪ್ರದೇಶದಲ್ಲಿ ಬಂದರಿನ ದ್ವೀಪ ಪ್ರದೇಶದಲ್ಲಿ ಸೌರಕೃಷಿಯೂ ಸ್ಮಾಟ್ ಸಿಟಿ ಯೋಜನೆ ಪ್ರಸ್ತಾವನೆಯಲ್ಲಿದೆ ಎಂದು ಅವರು ವಿವರಿಸಿದರು.
ಪಾನ್ ಸಿಟಿ ಪ್ರಸ್ತಾವನೆಯಡಿ, ವಿವಿಧ ಯೋಜನೆಗಳ ಮಾಹಿತಿಯಲ್ಲಿ ನೀಡುವ ‘ಒನ್ ಟಚ್ ಮಂಗಳೂರು’ ಎಂಬ ಮೊಬೈಲ್ ಆ್ಯಪ್ ಹಾಗೂ ‘ಒನ್ ಆ್ಯಕ್ಸೆಸ್ ಮಂಗಳೂರು’ ಎಂಬ ವೆಬ್ ಬಳಕೆ ಸೇರಿದಂತೆ ತಂತ್ರಜ್ಞಾನಗಳ ಬಳಕೆಯನ್ನು ಉಲ್ಲೇಖಿಸಲಾಗಿದೆ. ಸಾರ್ವಜನಿಕ ಸೇವೆಗಳ ಬಳಕೆ ಮತ್ತು ಲಭ್ಯತೆಯ ಸ್ಪಷ್ಟ ಸುಧಾರಣೆಗೆ ಸಾರ್ವಜನಿಕ ವ್ಯವಸ್ಥೆಯಲ್ಲಿನ ತಂತ್ರಜ್ಞಾನದ ಬಳಕೆಯನ್ನು ಸ್ಮಾಟ್ ಬಳಕೆ ನಿರ್ವಹಣೆಗೊಳಪಡಿಸುವುದೂ ಪ್ರಸ್ತಾವನೆಯಲ್ಲಿ ಸೇರಿದೆ ಎಂದು ಮೇಯರ್ ತಿಳಿಸಿದರು.
ಯಾರ್ಯಾರ ಪಾಲು ಎಷ್ಟೆಷ್ಟು?
ಐದು ವರ್ಷಗಳಲ್ಲಿ ಅನುಷ್ಠಾನಗೊಳ್ಳಲಿರುವ ಮಂಗಳೂರು ಸ್ಮಾಟ್ ಸಿಟಿ ಯೋಜನೆಗೆ ಒಟ್ಟು ಯೋಜನಾ ವೆಚ್ಚದಲ್ಲಿ ಶೇ. 49ರಷ್ಟನ್ನು ಅಂದರೆ 973.56 ಕೋಟಿ ರೂ.ಗಳನ್ನು ಸ್ಮಾಟ್ ಸಿಟಿ ಅನುದಾನಡಿ (ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೇ. 50ರ ಅನುಪಾತದಲ್ಲಿ) ಭರಿಸಲಾಗುವುದು. ಉಳಿದಂತೆ ಸಾರ್ವಜನಿಕ ಖಾಸಗಿ ಅನುದಾನ 516.95 ಕೋಟಿರೂ., ಭಾರತ ಸರಕಾರದ ವಿವಿಧ ಯೋಜನೆಗಳಿಂದ 126.85 ಕೋಟಿ ರೂ., ರಾಜ್ಯ ಸರಕಾರದ ವಿವಿಧ ಯೋಜನೆಗಳಿಂದ 163.93 ಕೋಟಿ ರೂ., ಎಡಿಬಿಯಿಂದ 128.75 ಕೋಟಿ ರೂ., ನಗರ ಪಾಲಿಕೆಯ ಸ್ವಂತ ನಿಧಿಯಿಂದ 78.90 ಕೋಟಿರೂ., ಫಲಾನುಭವಿಗಳ ಕೊಡುಗೆಯಾಗಿ 11.78 ಕೋಟಿ ರೂ.ಗಳನ್ನು ಈ ಯೋಜನೆಗಾಗಿ ಭರಿಸಲಾಗುತ್ತದೆ ಎಂದು ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಮಾಹಿತಿ ನೀಡಿದರು.
ಸಾಗರ ತೀರದ ಅಭಿವೃದ್ದಿ ಗುರಿ
ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ವಸ್ತುಸಂಗ್ರಹಾಲಯವನ್ನಾಗಿ ರೂಪಿಸುವುದು ಹಾಗೂ ನಗರದ ಇತರ ಪ್ರವಾಸೋದ್ಯಮ ಅಭಿವೃದ್ದಿ, 20 ವರ್ಷಗಳ ದೃಷ್ಟಿಯಿಂದ ಆರ್ಥಿಕ ವ್ಯೆಹಾತ್ಮಕ ಯೋಜನೆ ಜಾರಿ, ಪ್ರವಾಸೋದ್ಯಮ ದೃಷ್ಟಿಯಿಂದ ನೌಕಾ ಸಂಬಂಧಿತ ವಿಷಯದಲ್ಲಿ ಅಭಿವೃದ್ದಿ, ಸಾಗರ ತೀರದ ಅಭಿವೃದ್ದಿಗೆ ವಿಶೇಷ ಗಮನ ಹಾಗೂ ಹಳೆ ಬಂದರನ್ನು ನವಮಂಗಳೂರು ಬಂದರಿಗೆ ಸಂಪರ್ಕಿಸುವ ಪ್ರಯತ್ನಗಳ ಬಗ್ಗೆಯೂ ಪ್ರಸ್ತಾವನೆಯಲ್ಲಿ ಸಲಹೆ ನೀಡಲಾಗಿತ್ತು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಿಲತಾ, ಸದಸ್ಯರಾದ ಸುಧೀರ್ ಶೆಟ್ಟಿ, ಅಶೋಕ್ ಡಿ.ಕೆ., ನವೀನ್ ಡಿಸೋಜಾ, ಪ್ರವೀಣ್ ಚಂದ್ರ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಪ್ರಥಮ ಆಯ್ಕೆಯಲ್ಲಿ ಕೈಬಿಟ್ಟರೂ, ದ್ವಿತೀಯ ಹಂತದಲ್ಲಿ ದೊರೆಯಿತು!
ಪ್ರಥಮ ಹಂತದ ಆಯ್ಕೆಯಲ್ಲಿಯೇ ಮಂಗಳೂರಿಗೆ ಸ್ಮಾಟ್ ಸಿಟಿ ಯೋಜನೆ ದೊರೆಯುವ ಅವಕಾಶ ಇತ್ತು. ಆದರೆ, ಆ ಸಂದರ್ಭ 20,000 ಕೋಟಿ ರೂ.ಗಳ ಮಂಗಳೂರಿನ ದೀರ್ಘಕಾಲೀನ ಸುಮಾರು 20 ವರ್ಷಗಳ ಅವಧಿಯ ಸಮಗ್ರ ಅಭಿವೃದ್ಧಿ ಯೋಜನೆಯ ಪ್ರಸ್ತಾವನೆಯನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸಲ್ಲಿಸಲಾಗಿತ್ತು. ಪಾಲಿಕೆಯ ಅಭಿವೃದ್ಧಿಯ ನಿರೀಕ್ಷೆ ದೀರ್ಘಕಾಲೀನವಾದ ಹಿನ್ನೆಲೆಯಲ್ಲಿ ಪ್ರಥಮ ಹಂತದ ಆಯ್ಕೆಯಲ್ಲಿ ಮಂಗಳೂರು ಸ್ಮಾಟ್ ಸಿಟಿ ಯೋಜನೆಯಿಂದ ಕೈಬಿಟ್ಟು ಹೋಗಿತ್ತು. ಇದೀಗ ದ್ವಿತೀಯ ಹಂತದಲ್ಲಿ ಐದು ವರ್ಷಗಳ ಅವಧಿಗೆ 2,000 ಕೋಟಿ ರೂ.ಗಳ ಪ್ರಸ್ತಾವನೆಗೆ ದ್ವಿತೀಯ ಹಂತದಲ್ಲಿ ದೊರೆತಿದೆ. ಇದೀಗ ನಗರದಲ್ಲಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಅವರು ಹೇಳಿದರು.
ಶೀಘ್ರವೇ ಎಸ್‌ಪಿವಿ ರಚನೆ
ಐದು ವರ್ಷಗಳ ಈ ಯೋಜನೆಯನ್ನು ವಿಶೇಷ ಉದ್ದೇಶ ವಾಹಕ (ಸ್ಪೆಷಲ್ ಪರ್ಪಸ್ ವೆಹಿಕಲ್- ಎಸ್‌ಪಿವಿ) ಸಮಿತಿಯ ಮೂಲಕ ಅನುಷ್ಠಾನಗೊಳಿಸಬೇಕಿದೆ. ಈ ಎಸ್‌ಪಿವಿಯನ್ನು ಶೀಘ್ರದಲ್ಲೇ ರಚನೆ ಮಾಡಲಾಗುವುದು. ಸರಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿ ಈ ವಾಹಕದ ಅಧ್ಯಕ್ಷರಾಗಲಿದ್ದು, ಐಎಎಸ್ ಶ್ರೇಣಿಯ ಅಧಿಕಾರಿ ಆಡಳಿತ ನಿರ್ದೇಶಕರಾಗಲಿದ್ದಾರೆ. ಇದರ ಮೂಲಕವೇ ಸ್ಮಾರ್ಟ್‌ಸಿಟಿ ಯೋಜನೆಯ ಅನುಷ್ಠಾನ ಪ್ರಕ್ರಿಯೆಗಳು ನಡೆಯಲಿದೆ ಎಂದರು. ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ತಿಳಿಸಿದರು.
ಆದಾಯ ಕ್ರೋಢೀಕರಣ ಅತ್ಯಗತ್ಯ
ಮಂಗಳೂರು ನಗರವು ದ್ವಿತೀಯ ಹಂತದಲ್ಲಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವುದು ತುಂಬಾ ಸಂತಸ ಹಾಗೂ ಹೆಮ್ಮೆಯ ವಿಚಾರ. ಯೋಜನೆಯನ್ನು ವ್ಯವಸ್ಥಿತವಾಗಿ ರೂಪುಗೊಳಿಸುವ ಕಾರ್ಯ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಢೀಕರಿಸುವ ಕಾರ್ಯ ಅತ್ಯಂತ ಮುತುವರ್ಜಿಯಿಂದ ನಡೆಸಬೇಕಾಗಿದೆ. ಜತೆಗೆ ಸಾರ್ವಜನಿಕರಿಗೆ ನೀಡುವ ಸೌಕರ್ಯಗಳನ್ನು ಉತ್ತಮ ಪಡಿಸಬೇಕಾಗಿದೆ ಮನಪಾ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಅಭಿಪ್ರಾಯಿಸಿದರು.







