ವಿಧಾನಸಭೆ ವಿಸರ್ಜಿಸಿ, ಎಲ್ಲಾ ಪಕ್ಷಗಳೂ ಚುನಾವಣೆ ಬಹಿಷ್ಕರಿಸಬೇಕು: ಕುಮಾರಸ್ವಾಮಿ
ಕಾವೇರಿ ವಿಚಾರದಲ್ಲಿ ಸುಪ್ರೀಂ ತೀರ್ಪು

ಬೆಂಗಳೂರು, ಸೆ.20: ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸುವ ಮೂಲಕ ನಮ್ಮ ರಾಜ್ಯದ ಪಾಲಿಗೆ ಮರಣ ಶಾಸನವನ್ನು ಬರೆದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲದಿದ್ದರೆ, ವಿಧಾನಸಭೆಯನ್ನು ವಿಸರ್ಜನೆ ಮಾಡುವ ಮೂಲಕ ಕೇಂದ್ರ ಸರಕಾರಕ್ಕೆ ಸಡ್ಡು ಹೊಡೆಯಬೇಕು. ರಾಜ್ಯಪಾಲರ ಮೂಲಕ ಎಷ್ಟು ದಿನ ಅಧಿಕಾರ ನಡೆಸುತ್ತಾರೋ ನೋಡೋಣ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಗಳನ್ನು ಬಹಿಷ್ಕರಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವ ಯಾವ ನೈತಿಕತೆಯೂ ಕೇಂದ್ರ ಸರಕಾರಕ್ಕಿಲ್ಲ. ನಮ್ಮ ರಾಜ್ಯದ ಜಲಾಶಯಗಳು ನಿರ್ಮಾಣವಾಗಿರುವುದು, ನಮ್ಮ ಜನರ ಬೆವರಿನ ಹಣದಿಂದ. ಕೇಂದ್ರ ಒಂದು ನಯಾಪೈಸೆಯನ್ನು ನೀಡಿಲ್ಲ ಎಂದರು.
ಕೇಂದ್ರ ಸರಕಾರ ಹಾಗೂ ಸಾಂವಿಧಾನಿಕ ಚೌಕಟ್ಟಿನಲ್ಲಿ ಇರುವ ಸಂಸ್ಥೆಗಳು ಅನಾಗರಿಕವಾದ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ, ಕಾನೂನಿನ ಹೆಸರಿನಲ್ಲಿ ನಮ್ಮ ರಾಜ್ಯದ ಮೇಲೆ ಅತ್ಯಾಚಾರ ಮಾಡುತ್ತಿವೆ. ಯಾವ ಪುರುಷಾರ್ಥಕ್ಕಾಗಿ ನಾವು ಒಕ್ಕೂಟ ವ್ಯವಸ್ಥೆಯಲ್ಲಿರಬೇಕು. ಒಂದು ವೇಳೆ ನಿರ್ವಹಣಾ ಮಂಡಳಿ ರಚನೆಯಾದರೆ ನಮ್ಮ ಜಲಾಶಯಗಳೆಲ್ಲ ಅವರ ಸುಪರ್ದಿಗೆ ಹೋಗುತ್ತವೆ. ರಾಜ್ಯ ಸರಕಾರಕ್ಕೆ ಯಾವುದೇ ಅಧಿಕಾರವಿರುವುದಿಲ್ಲ ಎಂದು ಅವರು ಹೇಳಿದರು.
ಪದೇ ಪದೇ ಅನ್ಯಾಯವಾಗುತ್ತಿರುವುದು ನಮಗೆ, ಕಾವೇರಿ ನ್ಯಾಯಾಧೀಕರಣ 2007ರಲ್ಲಿ ನೀಡಿದ ಐತೀರ್ಪನ್ನು ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಇಷ್ಟು ವರ್ಷಗಳಲ್ಲಿ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿಲ್ಲ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಯಾವ ರೀತಿಯ ವಿಶ್ವಾಸ ಇಟ್ಟುಕೊಳ್ಳಬೇಕು. ಇವರೆಲ್ಲ ತಮಿಳುನಾಡು ಸರಕಾರದ ಮುಖ್ಯಮಂತ್ರಿಯ ಗುಲಾಮರೆ ಎಂದು ಅವರು ಪ್ರಶ್ನಿಸಿದರು.
ರಾಜ್ಯ ಸರಕಾರವು ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಕೆಲವು ವಿಚಾರಗಳನ್ನು ಬೀದಿಯಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ. ಆದುದರಿಂದ, ಕೂಡಲೆ ವಿಧಾನಸಭೆ ಅಧಿವೇಶನವನ್ನು ಸರಕಾರ ಕರೆಯಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.







