ಬಲೂಚಿಸ್ತಾನದ ಬಗ್ಗೆ ಕಾಳಜಿ; ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ: ಸಚಿವ ಖಾದರ್ ಅಸಮಾಧಾನ

ಮಂಗಳೂರು, ಸೆ. 20: ಬಲೂಚಿಸ್ತಾನದ ಬಗ್ಗೆ ಕಾಳಜಿ ವಹಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನದಿ ನೀರಿನ ವಿಷಯದಲ್ಲಿ ಕರ್ನಾಟಕಕ್ಕೆ ಇಷ್ಟೊಂದು ಅನ್ಯಾಯವಾಗುತ್ತಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಹಾರ ಸಚಿವ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ದುರದೃಷ್ಟಕರ. ಮೇಲಿಂದ ಮೇಲೆ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಕರ್ನಾಟಕ ತಮಿಳುನಾಡು ಮಧ್ಯೆ ನೀರಿನ ಸಮಸ್ಯೆಯೇ ಬಗೆಹರಿದಿಲ್ಲ್ಲ. ಇದರ ಮಧ್ಯೆ ನಿರ್ವಹಣೆ ಸಮಿತಿ ಮಾಡಲು ಆದೇಶಿಸಿರುವುದು ಆಶ್ಚರ್ಯಕರವಾಗಿದೆ. ಉಭಯ ರಾಜ್ಯಗಳ ನೀರಿನ ಸಮಸ್ಯೆ ಪರಿಹರಿಸುವ ಬದಲು, ಇದು ಸಮಸ್ಯೆಗಳನ್ನು ಇನ್ನಷ್ಟು ಜಟಿಲವಾಗಿಸಿದೆ. ಸುಪ್ರೀಂ ಕೋರ್ಟ್ ಕಾವೇರಿ ವಿವಾದ ಬಗ್ಗೆ ತೀರ್ಪು ಕೊಟ್ಟಿದೆಯೇ ಹೊರತು ನ್ಯಾಯ ಕೊಟ್ಟಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ವಿಷಯದ ಬಗ್ಗೆ ಪ್ರಧಾನಮಂತ್ರಿ ಅವರನ್ನು ಭೇಟಿಯಾಗಿ ಮನವರಿಕೆ ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಒಂದು ವಾರದಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರಧಾನಿ ಕಚೇರಿ ಸಿಎಂ ಭೇಟಿಗೆ ಸಮಯ ನಿಗದಿ ಮಾಡುತ್ತಿಲ್ಲ. ಇದು ಸಮಸ್ತ ರಾಜ್ಯದ ಜನತೆಗೆ ಮಾಡುವ ಅವಮಾನವಾಗಿದೆ. ಎರಡು ರಾಜ್ಯಗಳ ನಡುವಿನ ವಿವಾದ ಬಗೆಹರಿಸಲು ನಿರ್ಲಕ್ಷ ವಹಿಸುವ ಪ್ರಧಾನಿ ಮೋದಿ, ವಿದೇಶಿ ಬಲೂಚಿಸ್ಥಾನದ ಸಮಸ್ಯೆ ಬಗ್ಗೆ ತೀವ್ರ ಕಾಳಜಿ ವಹಿಸುತ್ತಿದ್ದಾರೆ. ಇದು ತೀವ್ರ ಖಂಡನೀಯ ಎಂದು ಯು.ಟಿ ಖಾದರ್ ತಿಳಿಸಿದ್ದಾರೆ.
ಕರ್ನಾಟಕದ ಎಲ್ಲಾ ಸಂಸದರು ಒಟ್ಟಾಗಿ ಪ್ರಧಾನಮಂತ್ರಿ ಅವರನ್ನು ಭೇಟಿಯಾಗಿ ಕಾವೇರಿ ನದಿ ನೀರು ವಿಷಯದಲ್ಲಿ ಮಧ್ಯಪ್ರವೇಶಿಸಲು ಒತ್ತಡ ಹೇರಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.







