ಗ್ರಾಮಸ್ಥರ ಸಮಸ್ಯೆಗೆ ಸ್ಪ ಂದಿಸಿದ ಶಾಸಕ ಸತೀಶ್ ಸೈಲ್

ಕಾರವಾರ, ಸೆ.20: ವಿದ್ಯುತ್ ಸಂಪರ್ಕ ಇಲ್ಲದೆ ದಿನ ಕಳೆಯುತ್ತಿದ್ದ ಮಹಿಳೆಯೋರ್ವರಿಗೆ ಶಾಸಕ ಸತೀಶ್ ಸೈಲ್ ತಮ್ಮ ಖರ್ಚಿನಿಂದ ವಿದ್ಯುತ್ ಕಂಬಗಳನ್ನು ಹಾಕಿ ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿದ್ದಾರೆ.
ತಾಲೂಕಿನ ಕುಗ್ರಾಮ ನಗೆಕೋವೆ ಗ್ರಾಮದ ಮಹಿಳೆ ಜಯಶ್ರಿ ಗೌಡ ಎಂಬವರು ಶಾಸಕ ಸತೀಶ ಸೈಲ್ ಅವರನ್ನು ಸೋಮವಾರ ಭೇಟಿ ಮಾಡಿ, ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಖಾಸಗಿ ಜಮೀನು ಮಾಲಕರು ವಿದ್ಯುತ್ ಲೈನ್ ಎಳೆಯಲು ಅಡ್ಡಿಪಡಿಸುತ್ತಿದ್ದಾರೆ. ಮನೆಗೆ ವಿದ್ಯುತ್ ಪಡೆಯಬೇಕು ಎಂದರೆ ಸುತ್ತುವರಿದು ವಿದ್ಯುತ್ ಕಂಬಗಳ ಆವಶ್ಯಕತೆ ಇದ್ದು, ಇದಕ್ಕೆ ಹೆಚ್ಚು ಖರ್ಚು ತಗಲುತ್ತದೆ ಎಂದು ಶಾಸಕರ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಶಾಸಕ ಸತೀಶ ಸೈಲ್, ಅಲ್ಲೇ ಇದ್ದ ಹೆಸ್ಕಾಂ ಅಧಿಕಾರಿಗೆ ಸಮಸ್ಯೆ ಬಗೆ ಹರಿಸಬೇಕು ಎಂದು ಸೂಚಿಸಿದರು. ಜಯಶ್ರೀ ಗೌಡ ಅವರ ಮನೆಗೆ ವಿದ್ಯುತ್ ಪೂರೈಸಲು ಬೇಕಾದ ಐದು ವಿದ್ಯುತ್ ಕಂಬಕ್ಕೆ 60 ಸಾವಿರ ರೂ. ತಾನು ನೀಡುವುದಾಗಿ ಹೇಳಿ ತಕ್ಷಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಬಳಿಕ ನಗಕೋವೆಯಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯುತ್ ಸಮಸ್ಯೆಗಳ ಜೊತೆಗೆ ಹಕ್ಕು ಪತ್ರದಲ್ಲಿರುವಂತೆ ರೆಕಾರ್ಡ್‌ನಲ್ಲಿ ಹೆಸರು ನಮೂದಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ಸೈಲ್ ಅವರಿಗೆ ತಮ್ಮ ಮನವಿಗಳನ್ನು ಸಲ್ಲಿಸಿದರು. ಶಿರವಾಡ ಹಾಗೂ ಮುಖೇರಿ ಭಾಗದ ಜನರು ಇಂದಿರಾ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದರು. ಈ ಭಾಗದ ಜನರಿಗೆ ಈಗಾಗಲೇ ಹಕ್ಕು ಪತ್ರ ವಿತರಿಸಲಾಗಿದ್ದು, ರೆಕಾರ್ಡ್‌ನಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಮನೆ ನಿರ್ಮಿಸಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ದೂರಿದರು.
ಹಿಂದುಳಿದ ಹಾಗೂ ಪರಿಶಿಷ್ಟ ಸಮಾಜದವರು ಬದುಕುತ್ತಿರುವ ಈ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಆರ್‌ಟಿಸಿಯಲ್ಲಿ ಹೆಸರು ನೋಂದಾವಣೆ ಮಾಡಬೇಕು. ಅಲ್ಲದೆ ಸರಕಾರದ ಸೌಲಭ್ಯಗಳು ನಮಗೆ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿದರು







