ಗುರು-ಹಿರಿಯರನ್ನು ಗೌರವಿಸದ ಶಿಕ್ಷಣ ವ್ಯರ್ಥ: ಡಾ. ನಾಗೇಂದ್ರಪ್ಪ
ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ

ಸೊರಬ, ಸೆ.20: ಆರೋಗ್ಯ ಮತ್ತು ಶಿಕ್ಷಣಕ್ಕೆ ಸರಕಾರಗಳು ಹೆಚ್ಚಿನ ಗಮನ ನೀಡಿದಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಸುಧನ್ಯ ಮೆಟರ್ನಿಟಿ ಮತ್ತು ಸುಧನ್ವ ಆಸ್ಪತ್ರೆಯ ಡಾ. ನಾಗೇಂದ್ರಪ್ಪ ಹೇಳಿದರು.
ತಾಲೂಕಿನ ಕೆರೆಕೊಪ್ಪ-ತೆಕ್ಕೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ಸುಧನ್ಯ ಮೆಟರ್ನಿಟಿ ಮತ್ತು ಸುಧನ್ವ ಆಸ್ಪತ್ರೆ ಹಾಗೂ ನಿಸರ್ಗ ಸ್ಟುಡಿಯೋ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಿಗೆ ಆರೋಗ್ಯ ಎಷ್ಟು ಮುಖ್ಯವೋ, ಸಂಸ್ಕಾರವಂತರಾಗಲು ಶಿಕ್ಷಣವೂ ಅಷ್ಟೆ ಮುಖ್ಯವಾಗಿದೆ. ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣಗಳು ಸೇರಿದಂತೆ ಉನ್ನತ ಶಿಕ್ಷಣಗಳನ್ನು ಪಡೆಯಲು ಆಂಗ್ಲ ಭಾಷೆ ಸೇರಿದಂತೆ ಇತರ ಭಾಷೆಗಳ ಕಲಿಕೆಯ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಇಂಗ್ಲೀಷ್ ಕಲಿಕೆಯಲ್ಲಿ ಹಿಂದುಳಿಯಬಾರದು ಎಂದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತಾರತಮ್ಯವಾಗದಂತೆ ಶಿಕ್ಷಕರು ಪಠ್ಯಗಳನ್ನು ಬೋಧಿಸಬೇಕು. ಆದರೆ, ಮಾತೃ ಭಾಷೆಯ ಕಲಿಕೆ ಮತ್ತು ವ್ಯಾಮೋಹವನ್ನು ಕಳೆದುಕೊಳ್ಳಬಾರದು. ವಿದ್ಯೆ ನೀಡಿ ಮಾರ್ಗದರ್ಶನ ಮಾಡಿದ ಗುರುಗಳಿಗೆ ಗೌರವ ನೀಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.
ದಿಲ್ಲಿಯ ಅಖಿಲ ಭಾರತ ಅಭಿಯಂತರರ ಒಕ್ಕೂಟದ ಕಾರ್ಯದರ್ಶಿ ಬಿ. ಪೀತಾಂಬರ ಸ್ವಾಮಿ ಮಾತನಾಡಿ, ಗುರು-ಹಿರಿಯರನ್ನು ಗೌರವಿಸದ ಶಿಕ್ಷಣ ವ್ಯರ್ಥವಾಗುತ್ತದೆ. ಬಡತನ ಶಾಪವೆಂದು ತಿಳಿಯದೆ ಅದನ್ನು ಮೆಟ್ಟಿನಿಂತು ಶಿಕ್ಷಣವನ್ನು ಪಡೆದರೆ ಯಾರೂ ಬಡವರಾಗಲು ಸಾಧ್ಯವಿಲ್ಲ. ಶಿಕ್ಷಣವನ್ನು ಪಡೆದ ವ್ಯಕ್ತಿ ಜಗತ್ತಿನಲ್ಲಿಯೇ ಮಾನ್ಯತೆಯನ್ನು ಗಳಿಸುತ್ತಾನೆ. ತನ್ನಿಂದ ವಿದ್ಯೆ ಕಲಿತ ವಿದ್ಯಾರ್ಥಿಯೋರ್ವ ಉನ್ನತ ಮಟ್ಟಕ್ಕೆ ಏರಿದಾಗ ಗುರುವಿಗೆ ಆಗುವ ಸಂತೋಷವನ್ನು ವರ್ಣಿಸಲು ಅಸಾಧ್ಯ ಎಂದರು.
ಇದೇ ಸಂದಭರ್ದಲ್ಲಿ ಸ.ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಅಣ್ಣಪ್ಪ, ಸಹ ಶಿಕ್ಷಕರಾದ ಜಯ ಲಕ್ಷ್ಮೀ, ಶಿವಾನಂದ, ಶಶಿಕಲಾ, ನಿರ್ಮಲಾ ಹಾಗೂ ಗ್ರಾಮದ ಹಿರಿಯರಾದ ದ್ಯಾವಪ್ಪ, ಯಲ್ಲಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಡೋಕಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ. ಸದಸ್ಯರಾದ ಶಿವಮ್ಮ, ಯಲ್ಲಮ್ಮ ಪ್ರಮುಖರಾದ ಒ.ಬಿ. ರಾಜಾಶೇಖರ್, ನಿವೃತ್ತ ಶಿಕ್ಷಕ ನಾಗಪ್ಪ, ಷಣ್ಮುಕಪ್ಪ, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ಕೆರೆಕೊಪ್ಪ-ತೆಕ್ಕೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಡಾ. ನಾಗೇಂದ್ರಪ್ಪ ಉದ್ಘಾಟಿಸಿದರು.







