ಬಿಎಸ್‌ವೈ ರಾಜಕಾರಣವೇ ಈಶ್ವರಪ್ಪ ಮುನಿಸಿಗೆ ಮುಖ್ಯ ಕಾರಣ: ಕೆಎಸ್‌ಈ ಆಪ್ತ ವರ್ಗ
ತವರೂರಲ್ಲಿ ಮೇಲುಗೈ ಸಾಧಿಸಲು ನಡೆದಿದೆ ಭಾರೀ ಹೋರಾಟ
ಬಿ.ರೇಣುಕೇಶ್
ಶಿವಮೊಗ್ಗ, ಸೆ.20: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಸಡ್ಡು ಹೊಡೆದು ನಿಂತಿದ್ದಾರೆ. ಇದರಿಂದ ಶಿವಮೊಗ್ಗ ಜಿಲ್ಲೆಯ ಈ ಇಬ್ಬರು ಮುಖಂಡರ ನಡುವೆ ಮತ್ತೊಂದು ಸುತ್ತಿನ ಜಂಗೀ ಕುಸ್ತಿಗೆ ವೇದಿಕೆ ಅಣಿಯಾಗಿದೆ. ಯಡಿಯೂರಪ್ಪಹಾಗೂ ಈಶ್ವರಪ್ಪ ನಡುವಿನ ಈ ಕಲಹಕ್ಕೆ ಮುಖ್ಯ ಕಾರಣವಾಗಿರುವುದು ಶಿವಮೊಗ್ಗ ಬಿಜೆಪಿ ರಾಜಕಾರಣ. ತವರೂರು ಬಿಜೆಪಿ ಪಾಳೆಯದಲ್ಲಿ ಹಿಡಿತ ಸಾಧಿಸಲು ಪರಸ್ಪರ ಪೈಪೋಟಿಗಿಳಿದಿರುವ ಈ ಇಬ್ಬರು ಮುಖಂಡರು, ಶಿವಮೊಗ್ಗದಲ್ಲಿ ನಾನಾ? ನೀನಾ? ಎಂಬ ಮಟ್ಟಕ್ಕೆ ಪರೋಕ್ಷ ಕಾದಾಟಕ್ಕಿಳಿದಿದ್ದಾರೆ. ಪ್ರಾಬಲ್ಯ: ಬಿಎಸ್‌ವೈ. ಪಕ್ಷದ ರಾಜ್ಯಾಧ್ಯಕ್ಷರಾಗಿ ನಿಯೋಜಿತವಾಗುತ್ತಿದ್ದಂತೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲಾ ಬಿಜೆಪಿ ಘಟಕದಲ್ಲಿ ಈಶ್ವರಪ್ಪಗಿದ್ದ ಪ್ರಾಬಲ್ಯ ಕಡಿಮೆಗೊಳಿಸುವ ಕೆಲಸ, ಜಿಲ್ಲಾಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ಪ್ರಮುಖ ವಿಭಾಗಗಳಿಗೆ ತಮ್ಮ ಆಪ್ತರು ಮಾತ್ರ ನೇಮಕವಾಗುವಂತೆ ನೋಡಿಕೊಂಡರು. ಬಿಎಸ್‌ವೈರವರ ಈ ರಾಜಕಾರಣವೇ ಕೆ.ಎಸ್.ಈಶ್ವರಪ್ಪ ಅವರ ಮುನಿಸಿಗೆ ಮುಖ್ಯ ಕಾರಣವಾಗಿದೆ. ಉಳಿದಂತೆ ಇತರೆ ಕಾರಣಗಳು ನಗಣ್ಯವಾಗಿವೆ ಎಂಬ ಮಾತನ್ನು ಸ್ವತಃ ಈಶ್ವರಪ್ಪಆಪ್ತ ವರ್ಗದವರು ಹೇಳುತ್ತಾರೆ. ಬ್ರಿಗೇಡ್ ಮೂಲಕ: ಈ ಇಬ್ಬರು ಮುಖಂಡರ ನಡುವೆ ಎಲ್ಲವೂ ಸರಿಯಾಯ್ತು ಎನ್ನುತ್ತಿದ್ದಂತೆ, ಕೆ.ಎಸ್.ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ್ನು ರಚಿಸಿಕೊಂಡು ಹಿಂದುಳಿದ ಹಾಗೂ ದಲಿತರ ಸಂಘಟನೆಗೆ ಮುಂದಾಗುವ ಮೂಲಕ ಬಿಎಸ್‌ವೈಗೆ ತಕ್ಕ ತಿರುಗೇಟು ನೀಡಲು ಮುಂದಾಗಿದ್ದಾರೆ. ಈಗಾಗಲೇ ಕೆ.ಎಸ್.ಈಶ್ವರಪ್ಪ ಬ್ರಿಗೇಡ್ ಸಂಘಟನೆಗಾಗಿ ರಾಜ್ಯಾದ್ಯಂತ ಸುತ್ತಾಟ ಕೂಡ ನಡೆಸುತ್ತಿದ್ದಾರೆ. ತವರೂರು ಶಿವಮೊಗ್ಗದಲ್ಲಿಯೂ ಸಂಘಟನೆಯ ಸಿದ್ಧತಾ ಸಭೆೆಗಳನ್ನು ನಡೆಸುತ್ತಿದ್ದಾರೆ. ಮತ್ತೊಂದೆಡೆ ಕೆ.ಎಸ್.ಈಶ್ವರಪ್ಪ ನಡೆ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಬಿ.ಎಸ್.ವೈ.ರವರು, ಬ್ರಿಗೇಡ್ ಜೊತೆ ಗುರುತಿಸಿಕೊಳ್ಳದಂತೆ ಬಹಿರಂಗವಾಗಿಯೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಶಿವಮೊಗ್ಗ ಕೇಂದ್ರ ಬಿಂದು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ಸಿಗದಂತೆ ಮಾಡಲು ಬಿ.ಎಸ್.ವೈ. ತಂತ್ರ ರೂಪಿಸಿದ್ದಾರೆನ್ನಲಾಗಿದೆೆ ಎಂದು ಹೇಳಲಾಗುತ್ತಿದೆ. ಯಾವ ಬಣದಲ್ಲಿ ಗುರುತಿಸಿಕೊಂಡರೂ ಕಷ್ಟ, ಗುರುತಿಸಿಕೊಳ್ಳದಿದ್ದರೂ ಕಷ್ಟ. ಎರಡೂ ಬಣಗಳಿಂದ ಅಂತರ ಕಾಯ್ದುಕೊಂಡರೆ ಪಾರ್ಟಿಯಲ್ಲಿ ನಮ್ಮನ್ನು ಕೇಳುವವರೇ ಇಲ್ಲದಂತಾಗುತ್ತಾರೆ. ನಮ್ಮ ಪಾಡು ಹೇಳತೀರದಾಗಿದೆ. ಇನ್ನಾದರೂ ಈ ಇಬ್ಬರು ಮುಖಂಡರು ಪಕ್ಷ ಹಾಗೂ ಕಾರ್ಯಕರ್ತರ ಹಿತದೃಷ್ಟಿಯಿಂದ ಜೊತೆಜೊತೆಯಾಗಿ ಹೋಗುವ ಕೆಲಸ ಮಾಡಬೇಕು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಶಿವಮೊಗ್ಗ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.







