ನಿರಾಶ್ರಿತರಿಗೆ ಪರಿಹಾರ ನೀಡುವಲ್ಲಿ ರಕ್ಷಣಾ ಇಲಾಖೆಯಿಂದ ವಿಳಂಬ: ಆರೋಪ
ಬೆಂಗಳೂರಿನಲ್ಲಿ ಸೆ.26ಕ್ಕೆ ಸಮನ್ವಯ ಸಮಿತಿ ಸಭೆ

ಕಾರವಾರ, ಸೆ.20: ನೌಕಾನೆಲೆ ನಿರಾಶ್ರಿತರಿಗೆ ಹೆಚ್ಚಿನ ಪರಿಹಾರಕ್ಕಾಗಿ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ಸೆ. 26 ರಂದು ಬೆಂಗಳೂರಿನಲ್ಲಿ ಸಮನ್ವಯ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಸ್ವಾಧೀನ ಕಾಯ್ದೆ ಸೆಕ್ಷನ್ 28 (ಅ) ಅಡಿಯಲ್ಲಿ ದಾಖಲಾದ ಪ್ರಕರಣಗಳಿಗೆ ಹೆಚ್ಚಿನ ಪರಿಹಾರಕ್ಕೆ ಜಿಲ್ಲಾಧಿಕಾರಿ ಆದೇಶಿಸಿದ್ದು, ಸೂಕ್ತ ದಾಖಲೆಗಳೊಂದಿಗೆ ಬೆಂಗಳೂರಿನ ಡಿಫೆನ್ಸ್ ಎಸ್ಟೇಟ್ ಅಧಿಕಾರಿಗೆ ರವಾನಿಸಲಾಗಿದೆ ಎಂದರು.
ರಕ್ಷಣಾ ಇಲಾಖೆಯಿಂದ ವಿಳಂಬ ನೀತಿ:
ಸೀಬರ್ಡ್ ನಿರಾಶ್ರಿತರಿಗೆ ಹೆಚ್ಚಿನ ಪರಿಹಾರವನ್ನು ನೀಡುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಕೇಂದ್ರ ರಕ್ಷಣಾ ಇಲಾಖೆ ಮಾತ್ರ ಈ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಪರಿಹಾರ ನೀಡುವುದನ್ನು ಬಿಟ್ಟು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುತ್ತಿದೆ. ಶೀಘ್ರ ಪರಿಹಾರಕ್ಕೆ ಕೋರಿ ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಡಿಫೆನ್ಸ್ ಎಸ್ಟೇಟ್ ಅಧಿಕಾರಿ ಹಾಗೂ ಪುಣೆಯ ಡಿಫೆನ್ಸ್ ಎಸ್ಟೇಟ್‌ನ ನಿರ್ದೇಶಕರನ್ನು ಆಹ್ವಾನಿಸಲು ತಾವು ಒತ್ತಾಯಿಸಿರುವುದಾಗಿ ತಿಳಿಸಿದರು. ರಸ್ತೆ ಅಭಿವೃದ್ಧಿ:
ಕಾರವಾರ ತಾಲೂಕಿನ ಚಿತ್ತಾಕುಲಾ ಗಾ್ರಮದ ಸದಾಶಿಗಡದಿಂದ ಕುರ್ಮಗಡ ರಸ್ತೆಯ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಮೊದಲು 5 ಮೀಟರ್ ರಸ್ತೆ ಮಂಜೂರಾಗಿತ್ತು. ಸಾರ್ವಜನಿಕರ ಆಗ್ರಹದ ಮೇರೆಗೆ ರಸ್ತೆಯನ್ನು 8 ಮೀಟರ್ ಅಗಲೀಕರಣಗೊಳಿಸಿ ರಸ್ತೆಯ ಅಭಿವೃದ್ಧಿ ಪಡಿಲಾಗುವುದು. ಅಲ್ಲದೆ, ರಸ್ತೆಯ ಮಧ್ಯದಲ್ಲಿ ಬರುವ ವಿದ್ಯುತ್ ಕಂಬಗಳನ್ನು ರಸ್ತೆ ಬದಿಗೆ
್ಥಳಾಂತರಿಸಲಾಗುವುದು ಎಂದು ಸೈಲ್ ಹೇಳಿದರು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಕೆಲವೆಡೆ ದುರುಪ ಯೋಗವಾದ ಬಗ್ಗೆ ಆರೋಪ ವಿದೆ. ಅರಣ್ಯ ಭೂಮಿಯಲ್ಲೂ ರಸ್ತೆ ಮಾಡಲಾಗಿದೆ. ಅಲ್ಲದೇ ನಿರ್ವಹಣೆ ಕಳಪೆಯಾಗಿದೆ ಎನ್ನುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ಸೈಲ್ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪಹಣಿಯಲ್ಲಿ ಹೆಸರಿಲ್ಲದೆ ತೊಂದರೆ:
ಕಾರವಾರ ತಾಲೂಕಿನ ಒಟ್ಟು 60 ಮಜಿರೆಗಳ ವ್ಯಾಪ್ತಿಯಲ್ಲಿ ಅರಣ್ಯ ಭೂಮಿಯಿಂದ ಪರಿವರ್ತನೆಯಾದ ನಿವೇಶನಗಳಲ್ಲಿ 2,000ಕ್ಕೂ ಹೆಚ್ಚು ಕುಟುಂಬಘಲು ಕಳೆದ 40 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿವೆ. ಆದರೆ ಈ ಕುಟುಂಬಗಳ ಕೇವಲ ಜಾಗದ ಹಕ್ಕು ಪತ್ರ ನೀಡಲಾಗಿದೆ. ಆದರೆ, ಪಹಣಿ ಪತ್ರಿಕೆಯಲ್ಲಿ ಆಯಾ ಹೆಸರು ನಮೂದಿಸಿಲ್ಲ. ಇದರಿಂದ ಈ ಕುಟುಂಬಗಳಿಗೆ ತೊಂದರೆಯಾಗಿದೆ. ಪಹಣಿ ಪತ್ರಿಕೆಯಲ್ಲಿ ಹೆಸರು ನೋಂದಾಯಿಸಿ ಜಾಗದ ಸಂಪೂರ್ಣ ಮಾಲಕತ್ವ ಒದಗಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿರುವುದಾಗಿ ಶಾಸಕರು ತಿಳಿಸಿದರು.
ಗ್ರಾಮ ಅಭಿವೃದ್ಧಿಗೆ ರಾಜಧನಕ್ಕೆ ಆಗ್ರಹ: ಮರಳು ಗಣಿಗಾರಿಕೆ ನಡೆಸುತ್ತಿರುವ ಗ್ರಾಮಗಳಿಂದ ಸಂದಾಯವಾಗುತ್ತಿರುವ ರಾಜಧನದ ಶೇ. 25ರಷ್ಟು ಪಾಲು ಆಗ್ರಾಮಗಳ ಅಭಿವೃದ್ಧಿಗೆ ನೀಡಬೇಕು. ಆದರೆ ಕಳೆದ 2 ವರ್ಷದಿಂದ ಕಾರವಾರ ಹಾಗೂ ಅಂಕೋಲಾ ತಾಲೂಕಿನ ಗ್ರಾಮಗಳಿಗೆ ರಾಜಧನದ ಪಾಲು ಲಭಿಸಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ಕಾರ್ಯದರ್ಶಿಗೆ ಪತ್ರ ಬರೆದು ಗ್ರಾಮಗಳಿಗೆ ರಾಜಧನ ಶೀಘ್ರ ಬಿಡುಗಡೆ ಮಾಡುವಂತೆ ಸೂಚಿಸಲಾಗುವುದು. ಒಂದೊಮ್ಮೆ ರಾಜಧನದ ಪಾಲು ನೀಡದಿದ್ದರೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಸತೀಶ ಸೈಲ್ ತಿಳಿಸಿದರು. ಬದಲಿ ಮಾರ್ಗಕ್ಕೆ ಸೂಚನೆ:
ರಾಷ್ಟ್ರೀಯ ಹೆದ್ದಾರಿ ಚುತುಷ್ಪಥ ಕಾಮಗಾರಿಯಲ್ಲಿ ಈ ಹಿಂದೆ ನಡೆದ ಸರ್ವೇಯಿಂದ ತೋಡೂರು, ಅಮದಳ್ಳಿ ಗ್ರಾಮದಲ್ಲಿ 150ಕ್ಕೂ ಹೆಚ್ಚು ಬಡವರ ಮನೆ, ಅಂಗಡಿಗಳು ನಾಶವಾಗಿದೆ. ಈ ಬಗ್ಗೆ ತಾವು ಬೇರೆ ಮಾರ್ಗವನ್ನು ಸೂಚಿಸಿದ್ದೇವೆ. ರಸ್ತೆ ನಿರ್ಮಾಣಕ್ಕೆ ನೂತನವಾಗಿ ಸೂಚಿಸಿದ ಮಾರ್ಗದ ಸರ್ವೇ ಕಾರ್ಯ ನಡೆಲಾಗುತ್ತಿದೆ ಎಂದು ಸೈಲ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಡಿಎ ಮಾಜಿ ಅಧ್ಯಕ್ಷ ಕೆ. ಶಂಭು ಶೆಟ್ಟಿ, ಜಿಪಂ ಸದಸ್ಯ ಕೃಷ್ಣ ಮೆಹ್ತಾ, ತೋಡೂರು ಗ್ರಾಪ ಉಪಾಧ್ಯಕ್ಷ ಚಂದ್ರಕಾಂತ ಚಿಂಚಣಕರ್ ಹಾಗೂ ಇನ್ನಿತರರು ಇದ್ದರು.







