ಮಡಿಕೇರಿ: ಪತ್ನಿಯ ಕೊಲೆಗೈದಾತನಿಗೆ ಜೀವಾವಧಿ ಶಿಕ್ಷೆ
ಮಡಿಕೇರಿ, ಸೆ.20 : ಪತ್ನಿಯನ್ನು ಹತ್ಯೆಗೈದ ವ್ಯಕ್ತಿಯೋರ್ವನಿಗೆ ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.
ಚೆಟ್ಟಳ್ಳಿ ಸಮೀಪದ ಮಲಕೋಡು ಗ್ರಾಮದ ನಿವಾಸಿ ಬೆಟ್ಟ ಕುರುಬರ ಮಣಿ ಎಂಬಾತನೆ ಶಿಕ್ಷೆಗೆ ಒಳಗಾದ ವ್ಯಕ್ತಿ. ಕೂಲಿ ಕೆಲಸ ಮಾಡಿಕೊಂಡು ಮಲಕೋಡು ಪೈಸಾರಿಯಲ್ಲಿ ಪತ್ನಿ ಕಾವೇರಿಯೊಂದಿಗೆ ವಾಸವಿದ್ದ ಮಣಿ ಆಕೆಯ ಶೀಲ ಶಂಕಿಸಿ 2014 ರ ಮೇ 26 ರಂದು ರಾತ್ರಿ ಆಕೆಗೆ ಬಲವಂತವಾಗಿ ವಿಷ ಪದಾರ್ಥ ತಿನ್ನಿಸಿ ಹತ್ಯೆ ಮಾಡಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಡಿ. ಪವನೇಶ್ ಅವರಿದ್ದ ನ್ಯಾಯಪೀಠ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿ ಮಣಿಗೆ ಜೀವಾವಧಿ ಶಿಕ್ಷೆ ಮತ್ತು 7, 500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದು, ಪಾವತಿಯಾಗುವ ದಂಡದಲ್ಲಿ 5 ಸಾವಿರ ರೂ. ಮೃತಳ ತಾಯಿ ಚೋಮಿಗೆ ಪರಿಹಾರವಾಗಿ ನೀಡಲು ಆದೇಶಿಸಿದೆ.







